ಡಾ. ಅಜಯ್ ಸಿಂಗ್ಗೆ ಒಲಿದ ಸಚಿವ ಸ್ಥಾನ | ಜೇವರ್ಗಿಯಲ್ಲಿ ಸಂಭ್ರಮ
ಸಚಿವ ಸಂಪುಟಕ್ಕೆ ಡಾ. ಅಜಯ್ ಸಿಂಗ್ ಸೇರ್ಪಡೆ; ಕಲ್ಯಾಣ ಕರ್ನಾಟಕಕ್ಕೆ ಮತ್ತೊಂದು ಪ್ರತಿನಿಧಿತ್ವ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಕಾಂಗ್ರೆಸ್ ನಾಯಕ ಹಾಗೂ ಜೇವರ್ಗಿ ಕ್ಷೇತ್ರದ ಸತತ ಮೂರು ಅವಧಿಯ ಶಾಸಕ ಡಾ. ಅಜಯ್ ಧರ್ಮಸಿಂಗ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ವಿಸ್ತರಣೆಯಾಗಲಿರುವ ಎರಡನೇ ಹಂತದ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
1974ರ ಜನವರಿ 29ರಂದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ಜನಿಸಿದ ಡಾ. ಅಜಯ್ ಸಿಂಗ್ ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಹಾಗೂ ಪ್ರಭಾವತಿ ಸಿಂಗ್ ದಂಪತಿಯ ಪುತ್ರ. ಬೆಂಗಳೂರಿನ ಎಂ.ಎಸ್. ರಾಮಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಎಂ.ಬಿ.ಬಿ.ಎಸ್. ಪದವಿ ಪಡೆದ ಅವರು, ವೈದ್ಯ ವೃತ್ತಿಯೊಂದಿಗೆ ಸಮಾಜಸೇವೆ ಹಾಗೂ ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
2005ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸದಸ್ಯರಾಗಿ ರಾಜಕೀಯ ಪ್ರವೇಶಿಸಿದ ಅವರು, 2008–09ರ ಅವಧಿಯಲ್ಲಿ ಕರ್ನಾಟಕ ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. 2010ರ ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರೂ, 2013ರ ವಿಧಾನಸಭಾ ಚುನಾವಣೆಯಲ್ಲಿ ಜೇವರ್ಗಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿಯನ್ನು 36,700 ಮತಗಳ ಅಂತರದಿಂದ ಪರಾಭವಗೊಳಿಸುವ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.
ಬಳಿಕ 2018 ಹಾಗೂ 2023ರ ವಿಧಾನಸಭಾ ಚುನಾವಣೆಯಲ್ಲೂ ಸತತವಾಗಿ ಗೆಲುವು ಸಾಧಿಸುವ ಮೂಲಕ ಜೇವರ್ಗಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
2009ರ ಲೋಕಸಭಾ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ತಮ್ಮ ತಂದೆ ದಿವಂಗತ ಧರ್ಮಸಿಂಗ್ ಅವರ ಚುನಾವಣಾ ಪ್ರಚಾರದ ನೇತೃತ್ವ ವಹಿಸಿ ಯಶಸ್ವಿ ತಂತ್ರ ರೂಪಿಸುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು. ಆ ಚುನಾವಣೆಯಲ್ಲಿ ಧರ್ಮಸಿಂಗ್ ಅವರು 39,619 ಮತಗಳ ಅಂತರದಿಂದ ಜಯಗಳಿಸಿದ್ದರು.
ಆಡಳಿತಾತ್ಮಕ ಹೊಣೆಗಾರಿಕೆಗಳಲ್ಲಿಯೂ ಡಾ. ಅಜಯ್ ಸಿಂಗ್ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ‘ಅಕ್ಷರ ಆವಿಷ್ಕಾರ’, ‘ಆರೋಗ್ಯ ಆವಿಷ್ಕಾರ’ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದರು. 2020ರಲ್ಲಿ ಕರ್ನಾಟಕ ವಿಧಾನಸಭೆಯ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕರಾಗಿ ನೇಮಕಗೊಂಡ ಅವರು, ಬಳಿಕ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರಾಗಿಯೂ ಸೇವೆ ಸಲ್ಲಿಸಿದ್ದರು.
ಸಚಿವ ಸಂಪುಟದಲ್ಲಿ ಡಾ. ಅಜಯ್ ಸಿಂಗ್ ಅವರಿಗೆ ಅವಕಾಶ ದೊರೆತಿರುವುದು ಕಲ್ಯಾಣ ಕರ್ನಾಟಕ ಭಾಗಕ್ಕೆ ಮತ್ತಷ್ಟು ರಾಜಕೀಯ ಪ್ರಾತಿನಿಧ್ಯ ದೊರೆತಂತಾಗಿದ್ದು, ಪ್ರಾದೇಶಿಕ ಅಭಿವೃದ್ಧಿ ಹಾಗೂ ಜನಪರ ಯೋಜನೆಗಳಿಗೆ ಹೊಸ ವೇಗ ಸಿಗುವ ನಿರೀಕ್ಷೆ ಮೂಡಿಸಿದೆ.



