ದಾಸ ತತ್ವಗಳ ಮೂಲಕ ಸಾಮಾಜಿಕ ಜಾಗೃತಿ ಅಗತ್ಯ – ದತ್ತಾತ್ರೇಯ ಪಾಟೀಲ ರೇವೂರ
ಆ.9ರಂದು ಕಲಬುರಗಿಯಲ್ಲಿ ದಾಸ ಸಾಹಿತ್ಯ ಸಮ್ಮೇಳನ

ಕಲಬುರಗಿ: ದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿದ್ದ ಅನಿಷ್ಠ ಪದ್ಧತಿ, ಅಸಮಾನತೆ, ಶೋಷಣೆ ಹಾಗೂ ಅಂಕುಡೊಂಕುಗಳನ್ನು ತಿದ್ದುವ ಮಹತ್ತರ ಕಾರ್ಯ ಮಾಡಿದ್ದಾರೆ. ಅವರ ತತ್ವ, ಸಂದೇಶ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಇಂತಹ ಸಾಹಿತ್ಯ ಸಮ್ಮೇಳನಗಳು ಅರ್ಥಪೂರ್ಣ ಪಾತ್ರ ವಹಿಸಬೇಕು ಎಂದು ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಸಾಪ ದಕ್ಷಿಣ ವಲಯದ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 9ರಂದು ನಗರದ ಕನ್ನಡ ಭವನದಲ್ಲಿ ನಡೆಯಲಿರುವ ದಾಸ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ದಾಸ ಸಾಹಿತ್ಯ ಸಮ್ಮೇಳನವೂ ಅದರಲ್ಲಿ ಪ್ರಮುಖವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಸಾಪ ಪ್ರಮುಖರಾದ ಮಲ್ಲಿನಾಥ ಸಂಗಶೆಟ್ಟಿ, ಮಂಜುನಾಥ ಕಂಬಾಳಿಮಠ, ಬಾಬುರಾವ ಪಾಟೀಲ, ಸೋಮಶೇಖರಯ್ಯ ಹೊಸಮಠ, ಗಣೇಶ ಚಿನ್ನಾಕಾರ, ಪರಮಾನಂದ ಸರಸಂಬಿ, ಅಮೃತಪ್ಪ ಅಣೂರ, ರಾಜೇಂದ್ರ ಮಾಡಬೂಳ, ರಾಜಶೇಖರ ಚಿಂಚೋಳಿ, ಗಂಗಾಧರ ಬಂಗರಗಿ, ಮಹಾಲಿಂಗಯ್ಯ ಸ್ವಾಮಿ, ಚಂದ್ರಕಾಂತ ಸೂರನ್, ಸಂಗಪ್ಪ ಚೋರಗಸ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಮ್ಮೇಳನದ ಕಾರ್ಯಕ್ರಮ
ಆಗಸ್ಟ್ 9ರಂದು ನಗರದ ಕನ್ನಡ ಭವನದಲ್ಲಿ ಸುರಪುರ ಆನಂದದಾಸರು ವೇದಿಕೆಯಡಿ ಹಿರಿಯ ದಾಸ ಸಾಹಿತಿ ಡಾ. ಸುರೇಶ ಜಾಧವ ಅವರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಡಿ.ಬಿ. ನಾಯಕ ಉದ್ಘಾಟಿಸಲಿದ್ದಾರೆ.
ಹಿರಿಯ ಪತ್ರಕರ್ತ ಡಾ. ಶ್ರೀನಿವಾಸ ಸಿರನೂರಕರ್, ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ, ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಮಲ್ಲಣ್ಣ ಮಡಿವಾಳ, ಪಾಲಿಕೆ ಸದಸ್ಯ ವೀರಣ್ಣ ಹೊನ್ನಳ್ಳಿ, ರಮೇಶ ಚಿಚಕೋಟೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ದಕ್ಷಿಣ ವಲಯ ಅಧ್ಯಕ್ಷ ರವಿಕುಮಾರ ಶಹಾಪೂರಕರ ತಿಳಿಸಿದ್ದಾರೆ.
ದಾಸಾಮೃತ ಗೌರವ ಪುರಸ್ಕಾರ
ಸಾಹಿತ್ಯ, ಸಂಸ್ಕೃತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಶೇಷಮೂರ್ತಿ ಅವಧಾನಿ, ಕೃಷ್ಣಾಜೀ ಕುಲಕರ್ಣಿ, ಮುದಗಲ್ ವೆಂಕಟೇಶ, ಶಾಮರಾವ ಚಿಂಚೋಳಿ, ಗೋಪಾಲರಾವ ಟೆಂಗಳಿ, ಡಾ. ರಮೇಶ ಕುಲಕರ್ಣಿ, ಬಾಬುರಾವ ಕೋಬಾಳ, ಸುರೇಶ ಕೊಟಗಿ ಹಾಗೂ ಬಾಬುರಾವ ಕುಲಕರ್ಣಿ ಅವರಿಗೆ ‘ದಾಸಾಮೃತ ಗೌರವ ಪುರಸ್ಕಾರ’ ಪ್ರದಾನಿಸಿ ಸನ್ಮಾನಿಸಲಾಗುವುದು.
ಚಿಂತನಾಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ
ಮಧ್ಯಾಹ್ನ 12.45ಕ್ಕೆ ಹಿರಿಯ ಸಾಹಿತಿ ಡಾ. ಕೆ.ಎಸ್. ಬಂಧು ಅವರ ಅಧ್ಯಕ್ಷತೆಯಲ್ಲಿ ನಡೆಯುವ ‘ದಾಸ ದರ್ಶನ’ ವಿಶೇಷ ಚಿಂತನಾಗೋಷ್ಠಿಯಲ್ಲಿ ದಾಸ ಸಾಹಿತ್ಯದಲ್ಲಿನ ಸಾಮಾಜಿಕ ಸಾಮರಸ್ಯ, ಧೋರಣೆ–ಪ್ರೇರಣೆ ಹಾಗೂ ಸಮ್ಮೇಳನಾಧ್ಯಕ್ಷರ ಬದುಕು–ಬರಹ ಕುರಿತು ತಜ್ಞರು ಉಪನ್ಯಾಸ ನೀಡಲಿದ್ದಾರೆ.
ಸಂಜೆ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ. ಗವಿಸಿದ್ಧಪ್ಪ ಪಾಟೀಲ ಸಮಾರೋಪ ಭಾಷಣ ಮಾಡಲಿದ್ದು, ಪತ್ರಕರ್ತ ರಮೇಶ ಭಟ್, ಆನಂದತೀರ್ಥ ಜೋಶಿ, ಅವಿನಾಶ ಕುಲಕರ್ಣಿ ಹಾಗೂ ವಿಜಯಕುಮಾರ ಕಟ್ಟಿಮನಿ ಭಾಗವಹಿಸಲಿದ್ದಾರೆ.
ಇದೇ ವೇಳೆ ಸೈಖ್ಯ ಪ್ರವೀಣ ಕುಲಕರ್ಣಿ, ಶೃತಿ ಸಗರ ಮತ್ತು ತಂಡ, ಕಲ್ಪವೃಕ್ಷ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು, ಹರಿಹರ ಭಜನಾ ಮಂಡಳಿ ಹಾಗೂ ಪಾಂಡುರಂಗ ಭಜನಾ ಮಂಡಳಿಯಿಂದ ದಾಸರ ಕೀರ್ತನೆ, ಭಜನೆ ಹಾಗೂ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.
ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಲು ಅಗತ್ಯ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.



