ಕೆಪಿಎಸ್ಸಿ ಅಕ್ರಮ: ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
‘ಸಂಸ್ಥೆಯನ್ನು ಸರಿಪಡಿಸಲು ಅಥವಾ ರದ್ದು ಮಾಡಲು ಪ್ರಿಯಾಂಕ್ ಖರ್ಗೆಗೇನು ತೊಂದರೆ?’

ಬೆಂಗಳೂರು, ಆ. 30: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನೇಮಕಾತಿಗಳಲ್ಲಿ ವ್ಯಾಪಕ ಅಕ್ರಮ ಹಾಗೂ ಭ್ರಷ್ಟಾಚಾರ ನಡೆಯುತ್ತಿದ್ದು, ಲೋಪಗಳನ್ನು ಸರಿಪಡಿಸುವಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಎಸ್ಸಿ ನಡೆಸಿದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಹಾಗೂ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
‘ಕೆಪಿಎಸ್ಸಿ ಬಗ್ಗೆ ಸಾರ್ವಜನಿಕರಲ್ಲಿ ಅಸಹ್ಯಕರ ಭಾವನೆ ಮೂಡಿದೆ. ಸಂಸ್ಥೆಯು ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಅರ್ಹತೆ ಮತ್ತು ರ್ಯಾಂಕ್ ಪಡೆದ ಅಭ್ಯರ್ಥಿಗಳನ್ನು ಪಟ್ಟಿಯ ಕೊನೆಗೆ ತಳ್ಳಲಾಗುತ್ತಿದೆ’ ಎಂದು ದೂರಿದರು.
‘ನನಗೆ ಸಂಪೂರ್ಣ ಅಧಿಕಾರ ಸಿಕ್ಕರೆ ಕೆಪಿಎಸ್ಸಿಯನ್ನೇ ರದ್ದು ಮಾಡುತ್ತೇನೆ’ ಎಂದು ಹಿಂದೆ ಹೇಳಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿಕೊಂಡ ಅವರು, ‘ಈಗ ನಿಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ಸಂಸ್ಥೆಯನ್ನು ಸರಿಪಡಿಸಲು ಅಥವಾ ರದ್ದು ಮಾಡಲು ನಿಮಗೇನು ತೊಂದರೆ?’ ಎಂದು ಪ್ರಶ್ನಿಸಿದರು.
ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ಉಲ್ಲೇಖಿಸಿದ ಕುಮಾರಸ್ವಾಮಿ, ‘ನಾನು ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಕಾನೂನುಬಾಹಿರ ನಿರ್ದೇಶನ ನೀಡಿಲ್ಲ. 2006ರಲ್ಲಿ ಆಪ್ತರು ಅಥವಾ ಸಂಬಂಧಿಕರಿಗೆ ಮಣೆ ಹಾಕದೆ, ದಲಿತ ಸಮುದಾಯದ ಪ್ರಾಮಾಣಿಕ ವ್ಯಕ್ತಿಯೊಬ್ಬರನ್ನು ಕೆಪಿಎಸ್ಸಿ ಅಧ್ಯಕ್ಷರನ್ನಾಗಿ ಮಾಡಿದ್ದೆ’ ಎಂದು ಹೇಳಿದರು.
‘2013ರಿಂದ ಕೆಪಿಎಸ್ಸಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ. ಸಂಸ್ಥೆಯಲ್ಲಿರುವ ಐಎಎಸ್ ಅಧಿಕಾರಿಗಳು ಹಾಗೂ ಅಕ್ರಮ ಎಸಗಿದವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ. ಕೇವಲ ಹೇಳಿಕೆ ನೀಡದೆ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೇನೆ’ ಎಂದರು.
‘ಅಕ್ರಮದ ದಾಖಲೆ ಬಹಿರಂಗಪಡಿಸುವೆ’
ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವ ಕುರಿತು ಚರ್ಚೆ ನಡೆಯುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ನನ್ನ ವಿರುದ್ಧ ಅಧಿಕಾರಿಯೊಬ್ಬರು ಬಳಸಿದ್ದ ಶಬ್ದಗಳು ಎಲ್ಲರಿಗೂ ಗೊತ್ತಿವೆ. ಆ ಅಧಿಕಾರಿ ಮಾಡಿರುವ ಅಕ್ರಮಗಳೇನು ಎಂಬುದನ್ನು ನಾನು ಬಹಿರಂಗಪಡಿಸುತ್ತೇನೆ’ ಎಂದು ಹೇಳಿದರು.
‘ಈಗ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು ಅಮೆರಿಕಕ್ಕೆ ತೆರಳುತ್ತಿದ್ದೇನೆ. 10 ದಿನಗಳ ಬಳಿಕ ರಾಜ್ಯಕ್ಕೆ ಮರಳಿ ಮಾಧ್ಯಮಗಳ ಮುಂದೆ ಮಾತನಾಡುತ್ತೇನೆ. ದೇಶದಲ್ಲೇ ಅಲ್ಲೋಲ–ಕಲ್ಲೋಲ ಸೃಷ್ಟಿಸುವಂತಹ ವಿಷಯ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಜನರ ಮುಂದಿಡುತ್ತೇನೆ. ಬಳಿಕ ಕುಮಾರಸ್ವಾಮಿ ಏನೆಂಬುದು ಎಲ್ಲರಿಗೂ ಗೊತ್ತಾಗಲಿದೆ. ದಿನಕ್ಕೊಂದು ಸುದ್ದಿಯನ್ನು ನೀಡುತ್ತೇನೆ’ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ತಮ್ಮ ‘ಚರಿತ್ರೆ ಬಿಚ್ಚಿಡುತ್ತೇನೆ’ ಎಂದು ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ‘ನನ್ನ ಬಗ್ಗೆ ಯಾವ ದಾಖಲೆಗಳನ್ನು ಬಿಡುಗಡೆ ಮಾಡುತ್ತಾರೆ? ನಾನು ಯಾವುದೇ ಬೇನಾಮಿ ವ್ಯಾಪಾರ ಮಾಡಿಲ್ಲ. ರಾಜಕೀಯಕ್ಕೆ ಬರುವ ಮುಂಚೆಯೇ 46 ಎಕರೆ ಜಮೀನು ಖರೀದಿಸಿದ್ದೆ. ಅಲ್ಲಿಯೂ ನನ್ನನ್ನು ನೆಮ್ಮದಿಯಾಗಿ ಇರಲು ಬಿಡಲಿಲ್ಲ’ ಎಂದು ವಾಗ್ದಾಳಿ ನಡೆಸಿದರು.
₹87 ಕೋಟಿ ಅಕ್ರಮದ ಬಗ್ಗೆ ಸ್ಪಷ್ಟನೆಗೆ ಆಗ್ರಹ
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ₹87 ಕೋಟಿ ಅಕ್ರಮ ಹಾಗೂ ‘ಗೃಹಲಕ್ಷ್ಮಿ’ ಯೋಜನೆಯ ಸುಮಾರು ₹5,000 ಕೋಟಿ ಅನುದಾನದ ಬಳಕೆ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, ಮಾಜಿ ಸಚಿವ ನಾಗೇಂದ್ರ ಅವರ ರಾಜೀನಾಮೆ ಬಳಿಕವೂ ಪಾದಯಾತ್ರೆ ನಡೆಸುವ ಉದ್ದೇಶದ ಕುರಿತು ತಮ್ಮೊಂದಿಗೆ ಚರ್ಚೆ ನಡೆದಿಲ್ಲ ಎಂದರು.
‘ಪೂರ್ವನಿಗದಿತ ಕಾರ್ಯಕ್ರಮಗಳ ನಿಮಿತ್ತ ಸೆಪ್ಟೆಂಬರ್ 12ರವರೆಗೆ ಲಭ್ಯವಿರುವುದಿಲ್ಲ. ಹೀಗಾಗಿ ಪಾದಯಾತ್ರೆಯಲ್ಲಿ ನಾನು ಭಾಗವಹಿಸುತ್ತಿಲ್ಲ. ಆದರೆ ಜೆಡಿಎಸ್ನ ನಾಯಕರು ಹಾಗೂ ಕಾರ್ಯಕರ್ತರು ಸಾಂಕೇತಿಕವಾಗಿ ಬೆಂಬಲ ನೀಡಲಿದ್ದಾರೆ’ ಎಂದು ತಿಳಿಸಿದರು.
ಅಕ್ರಮಗಳ ವಿರುದ್ಧ ಹಾಗೂ ಉದ್ಯೋಗಾಕಾಂಕ್ಷಿಗಳ ಪರವಾಗಿ ಜೆಡಿಎಸ್ ಸದಾ ಧ್ವನಿ ಎತ್ತಲಿದೆ ಎಂದು ಅವರು ಹೇಳಿದರು.



