ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ನಿವೃತ್ತ ಚಿತ್ರಕಲಾ ಶಿಕ್ಷಕರಿಗೆ ಗೌರವ ಸನ್ಮಾನ

ಕಲಬುರಗಿ, ಆ. 10: ನಗರದ ಮಾತೋಶ್ರೀ ನೀಲಗಂಗಮ್ಮ ಗುರಪ್ಪ ಅಂದಾನಿ ಆರ್ಟ್ ಗ್ಯಾಲರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸನ್ಮಾನ ಸಮಾರಂಭ ಭಾನುವಾರ ನಡೆಯಿತು.
2025–26ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ಕು. ಸಾನವಿ ಎಸ್. ಮರಗೋಳ, ಸಾತ್ವಿಕ ಎಸ್. ಮರಗೋಳ, ಸೃಷ್ಟಿ ಆರ್. ಮುಡುಬಿ ಮತ್ತು ಕಾವ್ಯ ಎಂ. ಬಡಿಗೇರ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಇದೇ ವೇಳೆ ನಿವೃತ್ತ ಹಿರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಶಿವಾನಂದ ಕೊಪ್ಪದ ಹಾಗೂ ಚಿತ್ರಕಲಾ ಶಿಕ್ಷಕರಾದ ಸಿದ್ದಣ್ಣ ಎಸ್.ಎ. ದಂಪತಿಯನ್ನು ಗೌರವಿಸಲಾಯಿತು.
ಖ್ಯಾತ ಕಲಾವಿದ ವಿ.ಬಿ. ಬಿರಾದಾರ ಚಿತ್ರ ಬಿಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ನಿವೃತ್ತ ಶಿಕ್ಷಕರನ್ನು ಸಾರ್ವಜನಿಕ ವೇದಿಕೆಯಲ್ಲಿ ಗೌರವಿಸುವುದು ಸಮಾಜದಲ್ಲಿ ಸಕಾರಾತ್ಮಕ ಸಂದೇಶ ನೀಡುತ್ತದೆ. ಮಕ್ಕಳಲ್ಲಿ ಚಿತ್ರಕಲೆಯ ಆಸಕ್ತಿ ಬೆಳೆಸುವ ಅಗತ್ಯವಿದ್ದು, ಕಲೆ ಶಾಂತಿ, ಸಹನೆ, ನೆಮ್ಮದಿ ಮತ್ತು ಸೃಜನಶೀಲತೆಯನ್ನು ಬೆಳೆಸುವ ಮಾಧ್ಯಮವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿ, ಶಿಕ್ಷಕ ಹಾಗೂ ಸಾಹಿತಿ ರಾಜೇಂದ್ರ ಝಳಕಿ ಮಾತನಾಡಿ, ಕಲೆ ಮತ್ತು ಕಲಾವಿದರು ಸಮಾಜದ ಅಮೂಲ್ಯ ಸಂಪತ್ತಾಗಿದ್ದು, ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಚಿತ್ರಕಲಾ ಶಿಕ್ಷಕರ ಸಂಘ ನಿರಂತರವಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಗೌರವ ಸ್ವೀಕರಿಸಿದ ಶಿವಾನಂದ ಕೊಪ್ಪದ ಮಾತನಾಡಿ, 37 ವರ್ಷಗಳ ಸರ್ಕಾರಿ ಸೇವೆಯಲ್ಲಿ ಸಹಕರಿಸಿದ ಗುರುಗಳು, ಸಹೋದ್ಯೋಗಿಗಳು ಹಾಗೂ ಸಂಘದ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಜೀವನದಲ್ಲಿ ಹಲವು ಸನ್ಮಾನಗಳನ್ನು ಪಡೆದಿದ್ದರೂ, ಶಿಕ್ಷಕರಿಂದ ದೊರೆತ ಈ ಗೌರವ ವಿಶೇಷವಾಗಿದೆ ಎಂದು ಹೇಳಿದರು. ಕಲಾ ಶಿಕ್ಷಣವನ್ನು ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷ ಶಾಂತಮಲ್ಲ ಶಿವಬೋ ಮಾತನಾಡಿ, ಪ್ರತಿಭೆಗಳನ್ನು ಗುರುತಿಸುವುದು ಹಾಗೂ ನಿವೃತ್ತ ಶಿಕ್ಷಕರನ್ನು ಗೌರವಿಸುವುದು ಸಂಘದ ಪ್ರಮುಖ ಉದ್ದೇಶವಾಗಿದೆ. ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರ ಹುದ್ದೆಗಳು ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಶಿಕ್ಷಣ ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಕಲಾ ಶಿಕ್ಷಣಕ್ಕೆ ಉತ್ತೇಜನ ನೀಡಬೇಕು ಎಂದು ಒತ್ತಾಯಿಸಿದರು.
ವೇದಿಕೆಯಲ್ಲಿ ಗೌರೀಶ್ ಅಂದಾನಿ, ಧರ್ಮಾನಂದ ಎಂ.ಕೆ., ಕಲ್ಯಾಣಪ್ಪ ಹಂಗರಗಿ, ರಾಜಕುಮಾರ ಬಿರಾದಾರ, ರಾಮಗಿರಿ ಪೊಲೀಸ್ ಪಾಟೀಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮಲ್ಲಿಕಾರ್ಜುನ ಕೊರಳ್ಳಿ ಸ್ವಾಗತಿಸಿದರು. ಸಂಗಮೇಶ್ ಪ್ರಾರ್ಥನಾ ಗೀತೆ ಹಾಡಿದರು. ಹಣಮಂತ ಸನಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭು ಜಾಣ ಹಾಗೂ ಸೂರ್ಯಕಾಂತ ನಂದೂರ್ ಕಾರ್ಯಕ್ರಮ ನಿರೂಪಿಸಿದರು. ಜಗದೀಶ್ ಪಾಟೀಲ ವಂದಿಸಿದರು.
ಕಾರ್ಯಕ್ರಮದಲ್ಲಿ ಜನಪದ ಪರಿಷತ್ತಿನ ಅಧ್ಯಕ್ಷ ಸಿ.ಎಸ್. ಮಾಲಿ ಪಾಟೀಲ, ಅಣ್ಣಾರಾಯ ಕೋಬಾಳ, ಸಿದ್ದು ಮರಗೋಳ, ಕುಪೇಂದ್ರ ಕವಲ್ದಾರ್, ಸಂತೋಷ್ ಅಂಜುಟಿಗಿ, ಮಾನಪ್ಪ ನಾಯಕ್, ಸಂಪತ್ ಕುಮಾರ್, ಪ್ರಕಾಶ ಎನ್., ದೀಪಾ ಆರ್., ಭಾಗ್ಯಶ್ರೀ ಕುಲಕರ್ಣಿ, ಶಿವಲೀಲಾ ಉಪ್ಪಿನ, ರೂಪಾ ಕಲಶೆಟ್ಟಿ, ಅನುಪಮಾ ರೆಡ್ಡಿ, ವಿದ್ಯಾ ಕುಲಕರ್ಣಿ ಹಾಗೂ ಬಿ.ಎಂ. ರಾವೂರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.



