ಜನಮುಖಿ ಸಾಹಿತ್ಯ ರಚನೆಯಿಂದ ಸಮಾಜ ಪರಿವರ್ತನೆ ಸಾಧ್ಯ: ಶಕುಂತಲಾ ಪಾಟೀಲ ಜಾವಳಿ

ಕಲಬುರಗಿ, ಆ. 11: ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಯುವ ಮಹಿಳಾ ಬರಹಗಾರರು ಜನಸಾಮಾನ್ಯರ ಬದುಕು, ನೋವು–ನಲಿವುಗಳನ್ನು ಪ್ರತಿಬಿಂಬಿಸುವ ಜನಮುಖಿ ಸಾಹಿತ್ಯವನ್ನು ರಚಿಸಬೇಕು ಎಂದು ಕಲಬುರಗಿ ಜಿಲ್ಲಾ ಪ್ರಥಮ ಕಾವ್ಯ ಮಹಿಳಾ ಸಮ್ಮೇಳನದ ನಿಯೋಜಿತ ಸಮ್ಮೇಳನಾಧ್ಯಕ್ಷೆ ಹಾಗೂ ಹಿರಿಯ ಲೇಖಕಿ ಶಕುಂತಲಾ ಪಾಟೀಲ ಜಾವಳಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ, ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 16ರಂದು ನಗರದ ಕನ್ನಡ ಭವನದಲ್ಲಿ ನಡೆಯಲಿರುವ ಕಲಬುರಗಿ ಜಿಲ್ಲಾ ಪ್ರಥಮ ಕಾವ್ಯ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಅಧಿಕೃತ ಆಹ್ವಾನ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ಆಧುನಿಕ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಯಾವುದೇ ಸಾಹಿತ್ಯ ಕೃತಿ ಜನಸಾಮಾನ್ಯರ ಬದುಕಿಗೆ ಸ್ಪಂದಿಸುವಂತಿರಬೇಕು. ಸಮಾಜಮುಖಿ ಸಾಹಿತ್ಯವೇ ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆ ತರಬಲ್ಲದು ಎಂದು ಅವರು ಅಭಿಪ್ರಾಯಪಟ್ಟರು.
ಲೇಖಕರು ಸಂವೇದನಾಶೀಲತೆಯನ್ನು ಬೆಳೆಸಿಕೊಳ್ಳಬೇಕು. ಬದುಕಿನ ವಾಸ್ತವತೆಗಳನ್ನು ಗಟ್ಟಿತನದಿಂದ ಅಭಿವ್ಯಕ್ತಿಸುವ ಸಾಹಿತ್ಯವೇ ಕಾಲಾತೀತವಾಗಿರುತ್ತದೆ ಎಂದು ಅವರು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಮಹಿಳೆಯರು ಇಂದು ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ ಹಾಗೂ ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರ ಅಂತರಂಗದ ಧ್ವನಿಗೆ ವೇದಿಕೆ ಕಲ್ಪಿಸಿ, ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಇಂತಹ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವ ಹಲವು ರಚನಾತ್ಮಕ ಕಾರ್ಯಕ್ರಮಗಳನ್ನು ಪರಿಷತ್ತು ರೂಪಿಸುತ್ತಿದ್ದು, ಜಿಲ್ಲೆಯ ಲೇಖಕಿಯರು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಗಮನಾರ್ಹವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ ಸೇರಿದಂತೆ ನಂದಿನಿ ಸನಬಾಳ, ರೇಣುಕಾ ಎನ್., ಶಿವಲೀಲಾ ಕಲಗುರ್ಕಿ, ಧರ್ಮರಾಜ ಜಾವಳಿ, ಸೋಮಶೇಖರ ನಂದಿಧ್ವಜ, ಕುಪೇಂದ್ರ ಬರಗಾಲಿ, ಶರಣು ಹಾಗರಗುಂಡಗಿ, ರಾಜೇಂದ್ರ ಮಾಡಬೂಳ, ಹಣಮಂತರಾವ ಪೆಂಚನಪಳ್ಳಿ, ಅನೀಲಕುಮಾರ ಪಾಟೀಲ ತೇಗಲತಿಪ್ಪಿ, ಪ್ರಭುಶೆಟ್ಟಿ ಮುದ್ದಾ, ಸಿದ್ಧರಾಮ ಹಂಚನಾಳ, ಅಮೃತಪ್ಪ ಅಣೂರ, ರಮೇಶ ಬಡಿಗೇರ, ದಿನೇಶ ಮದಕರಿ, ಪರಮಾನಂದ ಸರಸಂಬಿ, ಹೆಚ್.ಎಸ್. ಬರಗಾಲಿ, ಸಂಗಪ್ಪ ಭೀಮಳ್ಳಿ, ರಾಜಶೇಖರ ಚಿಂಚೋಳಿ, ಮಲ್ಲಿನಾಥ ಸಂಗಶೇಟ್ಟಿ, ಜಯಶ್ರೀ ಜಮಾದಾರ, ಎಸ್.ಕೆ. ಬಿರಾದಾರ, ಕೇದಾರನಾಥ ಕುಲಕರ್ಣಿ, ರಾಜಶೇಖರ ಚೌದ್ರಿ, ವಿನೋದಕುಮಾರ ಜೆ.ಎಸ್., ರೇವಣಸಿದ್ಧ ಹೊಟ್ಟಿ, ಮಹಾಲಿಂಗಯ್ಯ ಸ್ವಾಮಿ, ಮಹಾನಂದಾ ಹುಲಿ, ಲಲಿತಾ ಪಾಟೀಲ, ರೂಪಾ ಪೂಜಾರಿ, ಸೋಮಶೇಖರಯ್ಯ ಹೊಸಮಠ, ಶಿವಾನಂದ ಸುರವಸೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



