ಆರ್ಟಿಐ ಅರ್ಜಿಗಳ ದುರುಪಯೋಗ: ಭೂಮಾಪನ ಸಿಬ್ಬಂದಿ ಆರೋಪ

ಚಿತ್ತಾಪುರ: ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿಯಲ್ಲಿ ಅನಗತ್ಯ ಅರ್ಜಿಗಳನ್ನು ಸಲ್ಲಿಸಿ, ದೂರವಾಣಿ ಕರೆಗಳ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಹಾಗೂ ಜೀವ ಬೆದರಿಕೆ ಹಾಕುವ ಮೂಲಕ ಕೆಲವು ವ್ಯಕ್ತಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಭೂಮಾಪನ ಸಿಬ್ಬಂದಿ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ದೂರು ನೀಡಿದ್ದಾರೆ.
ನಾಲವಾರ ಗ್ರಾಮದ ವಿಶ್ವನಾಥ ಚಂದನಕೇರಿ, ಅರುಣಕುಮಾರ ಪಟಶೆಟ್ಟಿ ಸೇರಿದಂತೆ ಕೆಲವರು ನಿರಂತರವಾಗಿ ದೂರವಾಣಿ ಕರೆ ಮಾಡಿ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ. ಆರ್ಟಿಐ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಅನಗತ್ಯ ಅರ್ಜಿಗಳನ್ನು ಸಲ್ಲಿಸುವ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಬ್ಲಾಕ್ಮೇಲ್ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ನೌಕರರ ಸಂಘದ ಚಿತ್ತಾಪುರ ತಾಲೂಕು ಶಾಖೆಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಪರವಾನಗಿ ಭೂಮಾಪಕರಾಗಿ ಕಾನೂನುಬದ್ಧವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೂ, ಕೆಲವು ವ್ಯಕ್ತಿಗಳು ಆಧಾರರಹಿತ ದೂರುಗಳನ್ನು ನೀಡುತ್ತಿದ್ದಾರೆ. ಕಚೇರಿ ಕೆಲಸದ ವೇಳೆಯಲ್ಲಿ ಅನಗತ್ಯ ಗಲಾಟೆ ಸೃಷ್ಟಿಸುವುದು, ಸುಳ್ಳು ಆರೋಪಗಳನ್ನು ಮಾಡುವುದು ಹಾಗೂ ಸಿಬ್ಬಂದಿಗೆ ಮಾನಸಿಕ ಕಿರುಕುಳ ನೀಡುತ್ತಿರುವ ಘಟನೆಗಳು ನಡೆಯುತ್ತಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದರಿಂದ ಕಚೇರಿಯ ದೈನಂದಿನ ಸರ್ಕಾರಿ ಕೆಲಸಗಳಿಗೆ ಅಡಚಣೆಯಾಗುತ್ತಿದ್ದು, ಸಿಬ್ಬಂದಿ ಆತಂಕದಿಂದ ಕರ್ತವ್ಯ ನಿರ್ವಹಿಸುವಂತಾಗಿದೆ. ಸರ್ಕಾರಿ ಕಚೇರಿಯ ಕೆಲಸಗಳು ಮುಕ್ತವಾಗಿ ಮತ್ತು ಶಾಂತಿಯುತವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸಿಬ್ಬಂದಿಗೆ ಬೆದರಿಕೆ ಹಾಕುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ತಹಶೀಲ್ದಾರ್ ಅವರನ್ನು ಒತ್ತಾಯಿಸಿದ್ದಾರೆ.
ತಾಲೂಕು ಸರ್ಕಾರಿ ಭೂಮಾಪಕರ ಸಂಘದ ಅಧ್ಯಕ್ಷ ಆಂಜನೇಯ ನಾಯ್ಕೋಡಿ, ಪರವಾನಗಿ ಭೂಮಾಪಕರ ಸಂಘದ ಅಧ್ಯಕ್ಷ ಅರುಣಕುಮಾರ ಶಂಭವದ, ಸಚಿನ್ ಭೈರಡಗಿ, ಮಲ್ಲಿಕಾರ್ಜುನ, ಜ್ಯೋತಿ, ಮಧುಸೂಧನ್ ರಾಠೋಡ್, ವೆಂಕಟೇಶ್, ಸದಾಶಿವರೆಡ್ಡಿ, ರಮೇಶ್ ಜಗಲಿ, ವಿನೋದ್ ಸಾಹುಕಾರ್ ಇದ್ದರು.



