ಕಲಬುರಗಿಜಿಲ್ಲೆ ಸುದ್ದಿ

ಎಸ್‌ಐಆರ್‌: 59,389 ಮತದಾರರಿಗೆ ವಿಚಾರಣೆಗೆ ನೋಟಿಸ್

ಕರಡು ಮತದಾರರ ಪಟ್ಟಿಯಲ್ಲಿನ 1.05 ಲಕ್ಷ ಮತದಾರರ ಪರಿಶೀಲನೆ; ಅ.12 ಕೊನೆಯ ವಿಚಾರಣೆ ದಿನ

ಕಲಬುರಗಿ, ಸೆ.10: ವಿಶೇಷ ಸಂಕ್ಷಿಪ್ತ ಮತದಾರರ ಪರಿಷ್ಕರಣೆ (ಎಸ್‌ಐಆರ್)-2026ರ ಅಂಗವಾಗಿ ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯಲ್ಲಿ 2002ರ ಎಸ್‌ಐಆರ್‌ ಪಟ್ಟಿಯ ಮಾಹಿತಿ ನೀಡದ ಹಾಗೂ ದಾಖಲೆಗಳಿಗೆ ತಾಳೆಯಾಗದ 1,05,493 ಮತದಾರರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.

ಮತದಾರರ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿ ಅವರ ಸಮಕ್ಷಮ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದ್ದು, ಈ ಪೈಕಿ 59,389 ಮತದಾರರಿಗೆ ಈಗಾಗಲೇ ನೋಟಿಸ್ ತಲುಪಿಸಲಾಗಿದೆ. ಇನ್ನೂ 46,111 ಮತದಾರರಿಗೆ ನೋಟಿಸ್ ನೀಡಬೇಕಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಇಕ್ರಂ ಶರೀಫ್ ತಿಳಿಸಿದ್ದಾರೆ.

ಆಗಸ್ಟ್ 24ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 18,49,585 ಮತದಾರರಿದ್ದಾರೆ. ಇವರಲ್ಲಿ 53,788 ಮತದಾರರು 2002ರ ಎಸ್‌ಐಆರ್‌ ಪಟ್ಟಿಯ ಮಾಹಿತಿಯನ್ನು ನೀಡದ ಕಾರಣ ‘ನೋ ಮ್ಯಾಪಿಂಗ್’ ಹಾಗೂ 51,705 ಮತದಾರರ ವಿವರಗಳು 2002ರ ಎಸ್‌ಐಆರ್‌ ಪಟ್ಟಿಯ ದಾಖಲೆಗಳಿಗೆ ತಾಳೆಯಾಗದ ಕಾರಣ ‘ಅನೋಮಲೀಸ್’ ಎಂದು ಗುರುತಿಸಲಾಗಿದೆ.

ಇಂತಹ ಮತದಾರರಿಗೆ ಸೆಪ್ಟೆಂಬರ್ 5ರಿಂದ ವಿಚಾರಣೆ ಆರಂಭವಾಗಿದ್ದು, ಅಕ್ಟೋಬರ್ 12 ಕೊನೆಯ ವಿಚಾರಣೆ ದಿನವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕ್ಷೇತ್ರವಾರು ನೋಟಿಸ್

ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ 6,179, ಜೇವರ್ಗಿಯಲ್ಲಿ 5,005, ಚಿತ್ತಾಪುರದಲ್ಲಿ 1,887, ಸೇಡಂನಲ್ಲಿ 3,516, ಚಿಂಚೋಳಿಯಲ್ಲಿ 3,625, ಗುಲಬರ್ಗಾ ಗ್ರಾಮಾಂತರದಲ್ಲಿ 6,400, ಗುಲಬರ್ಗಾ ದಕ್ಷಿಣದಲ್ಲಿ 13,816, ಗುಲಬರ್ಗಾ ಉತ್ತರದಲ್ಲಿ 14,070 ಹಾಗೂ ಆಳಂದ ಕ್ಷೇತ್ರದಲ್ಲಿ 4,891 ಮತದಾರರಿಗೆ ನೋಟಿಸ್ ನೀಡಲಾಗಿದೆ.

ವಿಚಾರಣೆ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ವಿಲೇವಾರಿ ಮಾಡಲು ಈಗಿರುವ 9 ಜನ ಎಇಆರ್‌ಒಗಳ ಜೊತೆಗೆ ಹೆಚ್ಚುವರಿಯಾಗಿ 67 ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

61 ಹೊಸ ಮತಗಟ್ಟೆ

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಮತಗಟ್ಟೆಗಳ ತರ್ಕಬದ್ಧೀಕರಣದ ನಂತರ ಜಿಲ್ಲೆಯಲ್ಲಿ 61 ಹೊಸ ಮತಗಟ್ಟೆಗಳನ್ನು ರಚಿಸಲಾಗಿದೆ. ಈ ಮತಗಟ್ಟೆಗಳಿಗೆ 61 ಬಿಎಲ್‌ಒಗಳನ್ನು ನೇಮಕ ಮಾಡಲಾಗಿದೆ.

ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಬಯಸುವವರಿಗಾಗಿ ಸೆಪ್ಟೆಂಬರ್ 19 ಮತ್ತು 20ರಂದು ಜಿಲ್ಲೆಯಾದ್ಯಂತ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಇಕ್ರಂ ಶರೀಫ್ ತಿಳಿಸಿದ್ದಾರೆ.

ಹೆಸರು ಸೇರ್ಪಡೆಗೆ ನಮೂನೆ–6

ಕರಡು ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ಮತದಾರರ ಹೆಸರು ಹೊರಗುಳಿದಿದ್ದರೆ, ನಮೂನೆ–6 ಭರ್ತಿ ಮಾಡಿ ಅಥವಾ ಆನ್‌ಲೈನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಈ ಪ್ರಕ್ರಿಯೆ ನಿರಂತರವಾಗಿರಲಿದೆ.

ಸ್ವೀಕರಿಸಲಾದ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಅರ್ಹರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು. ಸೆಪ್ಟೆಂಬರ್ 23ರೊಳಗೆ ಅರ್ಜಿ ಸಲ್ಲಿಸಿದರೆ ಅಕ್ಟೋಬರ್ 27ರಂದು ಪ್ರಕಟವಾಗುವ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಇಕ್ರಂ ಶರೀಫ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button