ಬೀದರ್

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ: ಸಿಇಒ ಗೀತಾ ಮಾಧವ

ಬೀದರ: ಬಸವಕಲ್ಯಾಣ ತಾಲೂಕಿನ ಮಠಾಳ ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಗೀತಾ ಮಾಧವ ವಿಠಲರಾವ್ ಭೇಟಿ ನೀಡಿ, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

ವಿಜಿ–ಜಿ–ರಾಮ್–ಜಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ತೆರಳಿದ ಅವರು, ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು.

‘ನಾನೂ ಬಡ ಕುಟುಂಬದಲ್ಲಿ ಜನಿಸಿದ್ದು, ತಂದೆ–ತಾಯಿಯ ಪರಿಶ್ರಮದಿಂದ ಈ ಹಂತಕ್ಕೆ ಬರಲು ಸಾಧ್ಯವಾಯಿತು’ ಎಂದು ತಮ್ಮ ಅನುಭವವನ್ನು ಕಾರ್ಮಿಕರೊಂದಿಗೆ ಹಂಚಿಕೊಂಡರು.

‘ನಿಮ್ಮ ಮಕ್ಕಳು ನಿಮ್ಮಂತೆ ಕೂಲಿ ಕೆಲಸ ಮಾಡಬಾರದು ಎನ್ನುವುದಾದರೆ ಅವರಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಅವರ ಭವಿಷ್ಯ ರೂಪಿಸಿದರೆ ಕುಟುಂಬದ ಜೀವನಮಟ್ಟವೂ ಸುಧಾರಿಸಲಿದೆ’ ಎಂದು ಹೇಳಿದರು.

ಕಾಮಗಾರಿ ನಿರ್ವಹಿಸಿದ ಕೂಲಿ ಕಾರ್ಮಿಕರಿಗೆ ಹಣ ಪಾವತಿಯಾಗುವ ಕುರಿತು ಯಾವುದೇ ಆತಂಕ ಬೇಡ. ಕೆಲಸ ಮಾಡಿದ ಹಣ ಖಂಡಿತವಾಗಿಯೂ ದೊರೆಯಲಿದೆ. ಈ ಬಗ್ಗೆ ಕಾರ್ಮಿಕರು ಚಿಂತೆ ಮಾಡಬೇಕಿಲ್ಲ ಎಂದು ಅವರು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಕಾರ್ಮಿಕರೊಂದಿಗೆ ಕೆಲಸದಲ್ಲೂ ಸಿಇಒ ಭಾಗವಹಿಸಿದರು.

ವಿಜಿ–ಜಿ–ರಾಮ್–ಜಿ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದ ಕೂಲಿ ಕಾರ್ಮಿಕರಿಗೆ ನೂತನ ಜಾಬ್ ಕಾರ್ಡ್‌ಗಳನ್ನು ವಿತರಿಸಿದರು. ಬಳಿಕ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಾಗೂ ಸ್ಥಳೀಯ ಮಟ್ಟದ ವ್ಯವಸ್ಥೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಸಂಯೋಜಕ ಶಿವರಾಜ್ ಪಾಟೀಲ್, ಐಸಿಎಸ್ ಸಂಯೋಜಕ ವೀರಾರೆಡ್ಡಿ, ತಾಂತ್ರಿಕ ಸಹಾಯಕ ಮಾಣಿಕ್, ಜಲೀಲ್ ಸಾಬ್, ಸುಭಾಷ್, ಮಲ್ಲಿಕಾರ್ಜುನ ಜಾಧವ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button