ವಿಶ್ವ ರೋಗಿ ಸುರಕ್ಷತಾ ದಿನ: ‘ಜೀವನಕ್ಕಾಗಿ ಸುರಕ್ಷಿತ ಆರೈಕೆ’ಗೆ ಕರೆ

ಕಲಬುರಗಿ, ಸೆ.17: ನಗರದ ಜಿಮ್ಸ್ ವೈದ್ಯಕೀಯ ಮಹಾವಿದ್ಯಾಲಯದ ಎನ್ಸಿಡಿ ಕೇಂದ್ರದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ಘಟಕ ಹಾಗೂ ಜಿಮ್ಸ್ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಗುರುವಾರ ವಿಶ್ವ ರೋಗಿ ಸುರಕ್ಷತಾ ದಿನ ಆಚರಿಸಲಾಯಿತು.
ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ರಾಕೇಶ್ ಕಾಂಬಳೆ, ಆರೋಗ್ಯ ಸೇವೆಯಲ್ಲಿ ರೋಗಿಗಳಿಗೆ ಉಂಟಾಗಬಹುದಾದ ತಪ್ಪಿಸಬಹುದಾದ ಹಾನಿಯ ಕುರಿತು ಜಾಗೃತಿ ಮೂಡಿಸುವುದು ಹಾಗೂ ಸುರಕ್ಷಿತ ಮತ್ತು ಗುಣಮಟ್ಟದ ಆರೈಕೆಯನ್ನು ಖಚಿತಪಡಿಸುವುದು ವಿಶ್ವ ರೋಗಿ ಸುರಕ್ಷತಾ ದಿನದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಪ್ರತಿ ವರ್ಷ ಸೆಪ್ಟೆಂಬರ್ 17ರಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹಾಗೂ ಜಾಗತಿಕ ಸಮುದಾಯಗಳು ಈ ದಿನವನ್ನು ಆಚರಿಸುತ್ತವೆ. ವೈದ್ಯಕೀಯ ಕ್ಷೇತ್ರದ ಮೂಲಭೂತ ತತ್ವವಾದ ‘ಮೊದಲು ಹಾನಿ ಮಾಡಬೇಡ’ ಎಂಬ ಸಂದೇಶವನ್ನು ಈ ದಿನ ನೆನಪಿಸುತ್ತದೆ. ಸುರಕ್ಷಿತ ಆರೋಗ್ಯ ಸೇವೆ ಎಂದರೆ ಕೇವಲ ತಪ್ಪುಗಳನ್ನು ತಡೆಯುವುದಲ್ಲ; ರೋಗಿಗಳು, ಆರೈಕೆದಾರರು ಹಾಗೂ ಆರೋಗ್ಯ ಕಾರ್ಯಕರ್ತರನ್ನು ಸುರಕ್ಷತೆಯ ಪಾಲುದಾರರನ್ನಾಗಿ ಮಾಡುವುದೂ ಅಗತ್ಯವಾಗಿದೆ ಎಂದರು.
WHO ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳಿಂದಾಗಿ ಪ್ರತಿ ವರ್ಷ ಸುಮಾರು 95 ಲಕ್ಷ ಜನರು ಸಾವನ್ನಪ್ಪುತ್ತಿದ್ದು, ಅವರಲ್ಲಿ ಸುಮಾರು ಅರ್ಧದಷ್ಟು ಸಾವುಗಳು 70 ವರ್ಷಕ್ಕಿಂತ ಮುನ್ನವೇ ಸಂಭವಿಸುತ್ತಿವೆ. ಈ ಅಂಕಿ-ಅಂಶಗಳು ರೋಗಿಗಳ ಸುರಕ್ಷತೆ ಹಾಗೂ ಗುಣಮಟ್ಟದ ಆರೋಗ್ಯ ಸೇವೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವನ್ನು ಸೂಚಿಸುತ್ತವೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಡಿಎಫ್ಡಬ್ಲ್ಯುಒ ಹಾಗೂ ನೋಡಲ್ ಅಧಿಕಾರಿ ಡಾ. ಸಂತೋಷ್ ಅಲ್ಗೂರ್ ಮಾತನಾಡಿ, ‘ಜೀವನಕ್ಕಾಗಿ ಸುರಕ್ಷಿತ ಆರೈಕೆ!’ ಎಂಬ ಈ ವರ್ಷದ ಘೋಷವಾಕ್ಯವು ಸಾಂಕ್ರಾಮಿಕವಲ್ಲದ ರೋಗಗಳಿಗೆ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ರೋಗಿಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ನೋಡಿಕೊಳ್ಳುವ ಸ್ಪಷ್ಟ ಸಂದೇಶ ನೀಡುತ್ತದೆ. ಇದಕ್ಕಾಗಿ ಸರ್ಕಾರ, ಆರೋಗ್ಯ ಸಂಸ್ಥೆಗಳು, ವೈದ್ಯಕೀಯ ವೃತ್ತಿಪರ ಸಂಘಟನೆಗಳು ಹಾಗೂ ನಾಗರಿಕ ಸಮಾಜ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದರು.
ನಂತರ ಡಿಸಿ-ಕ್ಯೂಎ ಡಾ. ವಿನೋದಕುಮಾರ್ ಬಿ.ಬಿ. ಅವರು ದಿನದ ಘೋಷವಾಕ್ಯವನ್ನು ಓದಿಸಿ, ರೋಗಿಗಳ ಸುರಕ್ಷತೆ ಕಾಪಾಡುವ ಕುರಿತು ಪ್ರಮಾಣ ಮಾಡಿಸಿದರು.
ಕಾರ್ಯಕ್ರಮವು ಡಿಎಚ್ಒ ಡಾ. ಶರಣಬಸಪ್ಪ ಕ್ಯಾತನಾಳ್, ಜಿಮ್ಸ್ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ್ ಸಿ.ಆರ್., ಉಪ ವೈದ್ಯಕೀಯ ಅಧೀಕ್ಷಕ ಡಾ. ರೇವಣಸಿದ್ದಪ್ಪ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ಮತ್ತು ಅಧೀಕ್ಷಕಿ ಡಾ. ರುಕಿಯಾ ಅಸ್ನಾ ರಬಾ ಅವರ ನೇತೃತ್ವದಲ್ಲಿ ನಡೆಯಿತು.
ಹಿರಿಯ ನಾಗರಿಕರ ವಾರ್ಡ್ನ ತಜ್ಞ ವೈದ್ಯಾಧಿಕಾರಿ ಡಾ. ಕೃಪಾಲಿ ಅಷ್ಟಗಿ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಡಾ. ಪ್ರೀತಮ್ ತೇಲ್ಕರ್, ಡಿಎಚ್ಕ್ಯೂಎಂ ಎಂ.ಡಿ. ಇರ್ಫಾನ್, ಎನ್ಸಿಡಿ ವೈದ್ಯಾಧಿಕಾರಿ ಡಾ. ಮಹಮ್ಮದ್ ವಾಸಿಮ್ ಅಹ್ಮದ್, ತಂಬಾಕು ವ್ಯಸನಮುಕ್ತ ಕಾರ್ಯಕ್ರಮದ ಸೈಕಾಲಜಿಸ್ಟ್ ಕೌನ್ಸಿಲರ್ ಮಂಜುನಾಥ ಕಂಬಾಳಿಮಠ, ಶುಶ್ರೂಷಕ ಅಧಿಕಾರಿ ನಟರಾಜ್ ಕಿರಣಗಿಕರ್, ಡಿಇಒ ಸಿದ್ದು ಕುಡ್ದಳ್ಳಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ರೋಗಿಗಳು ಉಪಸ್ಥಿತರಿದ್ದರು.



