ಕಲಬುರಗಿಜಿಲ್ಲೆ ಸುದ್ದಿ

ನ್ಯಾಯಬೆಲೆ ಅಂಗಡಿ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

ತಾಂಡಾದಲ್ಲಿ ಪಡಿತರ ವಿತರಣೆ; ಗ್ರಾಮದಲ್ಲೇ ವಿತರಿಸುವಂತೆ ಜಿಲ್ಲಾಧಿಕಾರಿಗೆ ಮನವಿ

ಜೇವರ್ಗಿ, ಸೆ.18: ತಾಲ್ಲೂಕಿನ ರಂಜಣಗಿ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ವಿತರಣೆ ವ್ಯವಸ್ಥೆಯಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಗ್ರಾಮದಲ್ಲಿ ಸುಮಾರು 250 ಪಡಿತರ ಚೀಟಿಗಳಿದ್ದು, ನ್ಯಾಯಬೆಲೆ ಅಂಗಡಿ ಮಾಲೀಕರು ಗ್ರಾಮದಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿರುವ ತಾಂಡಾದಲ್ಲಿ ಪಡಿತರ ವಿತರಿಸುತ್ತಿದ್ದಾರೆ. ಇದರಿಂದ ವಯೋವೃದ್ಧರು, ಮಹಿಳೆಯರು ಹಾಗೂ ದೂರ ತೆರಳಿ ಪಡಿತರ ಪಡೆಯಲು ಸಾಧ್ಯವಾಗದ ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.

ತಾಂಡಾದಲ್ಲಿ ಕೇವಲ 50 ಪಡಿತರ ಚೀಟಿಗಳಿದ್ದು, ಹೆಚ್ಚಿನ ಪಡಿತರ ಚೀಟಿಗಳು ಗ್ರಾಮದಲ್ಲಿದ್ದರೂ ಅಲ್ಲಿಯೇ ವಿತರಣೆ ಮಾಡುತ್ತಿರುವುದು ಸರಿಯಲ್ಲ. ಗ್ರಾಮದಲ್ಲಿಯೇ ಪಡಿತರ ವಿತರಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಪಡಿತರ ಪಡೆಯಲು ತೆರಳುವ ಮಹಿಳೆಯರನ್ನು ನ್ಯಾಯಬೆಲೆ ಅಂಗಡಿ ಮಾಲೀಕರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂಬ ಆರೋಪವನ್ನೂ ಗ್ರಾಮಸ್ಥರು ಮಾಡಿದರು. ಈ ಕುರಿತು ತಾಲ್ಲೂಕು ಆಹಾರ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ, ಕ್ರಮಕ್ಕೆ ಶಿಫಾರಸು ಮಾಡಿದ್ದರೂ ಇದುವರೆಗೆ ಯಾವುದೇ ಕ್ರಮ ಜರುಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಂದು ವಾರದ ಗಡುವು: ಸಮಸ್ಯೆ ಬಗೆಹರಿಸಿ ಗ್ರಾಮದಲ್ಲಿಯೇ ಪಡಿತರ ವಿತರಿಸುವ ವ್ಯವಸ್ಥೆ ಕಲ್ಪಿಸದಿದ್ದರೆ ಕಲಬುರಗಿ–ವಿಜಯಪುರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಖಾಜಾಪಟೇಲ್ ನಾಡಗೌಡ, ಮಲ್ಲಿಕಾರ್ಜುನ ಜೋಗುರ, ಮೀರಾಸಾಬ್ ಯಾಳವಾರ, ಅಜೀಜ್ ಪಟೇಲ್ ಮಾಲಿ, ರೆಹಮಾನ್ ಪಟೇಲ್ ಹೊಸಮನಿ, ಸರದಾರ ಪಟೇಲ್ ಹೊಸಮನಿ, ಅಲ್ತಾಫ್ ಯಾಳವಾರ, ಅನಾಸರ್ ಪಟೇಲ್, ಹಳಿಮನಿ ಮಲಕಪ್ಪ ಸಿಂಗೆ, ಹಣಮಂತ ಪೂಜಾರಿ, ಪ್ರಕಾಶ್ ತಲವಾರ್ ಸೇರಿದಂತೆ ಹಲವರು ಇದ್ದರು.

janabhipraya

https://janabhipraya.com

Related Articles

Leave a Reply

Your email address will not be published. Required fields are marked *

Back to top button