ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರರ ತ್ಯಾಗ ಸ್ಮರಿಸುವುದು ಕರ್ತವ್ಯ: ತಹಶೀಲ್ದಾರ್ ಅಂಜುಮ್ ತಬಸುಮ್

ಜೇವರ್ಗಿ, ಸೆ. 18: ಹೈದರಾಬಾದ್ ಕರ್ನಾಟಕ ಭಾಗವನ್ನು ನಿಜಾಮರ ಆಳ್ವಿಕೆಯಿಂದ ಮುಕ್ತಗೊಳಿಸಿ ಭಾರತದ ಒಕ್ಕೂಟಕ್ಕೆ ಸೇರಿಸಲು ಹೋರಾಡಿದ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸಿ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಹಶೀಲ್ದಾರ್ ಅಂಜುಮ್ ತಬಸುಮ್ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಹಾಗೂ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹೈದರಾಬಾದ್ ಕರ್ನಾಟಕ ವಿಮೋಚನೆಗಾಗಿ ನಡೆದ ಹೋರಾಟದ ಇತಿಹಾಸವನ್ನು ಇಂದಿನ ಪೀಳಿಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಪ್ರಗತಿಪರ ಚಿಂತಕ ಭಗವಂತರಾಯ ಬೇಟೂರ ಅವರು ಹೈದರಾಬಾದ್ ಕರ್ನಾಟಕ ವಿಮೋಚನೆಯ ಕುರಿತು ಉಪನ್ಯಾಸ ನೀಡಿದರು. ವಿಮೋಚನಾ ಹೋರಾಟದಲ್ಲಿ ಸರ್ದಾರ್ ಶರಣಗೌಡ, ಚನ್ನಬಸಪ್ಪ ಕುಳಗೇರಿ ಸೇರಿದಂತೆ ಹಲವರು ಮಹತ್ವದ ಕೊಡುಗೆ ನೀಡಿದ್ದಾರೆ. ತಾಲ್ಲೂಕಿನ ಮಳ್ಳಿ ಗ್ರಾಮದಲ್ಲಿ ನಡೆದ 11 ಜನರ ಸಾಮೂಹಿಕ ಹತ್ಯೆ ಸೇರಿದಂತೆ ಹೋರಾಟದ ಹಲವು ಘಟನೆಗಳು ಇಂದಿಗೂ ಮನಕಲಕುವಂತಿವೆ ಎಂದು ಅವರು ವಿವರಿಸಿದರು.
ಪ್ರತಿ ವರ್ಷ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ಆಗಮಿಸಿ ಧ್ವಜಾರೋಹಣ ನೆರವೇರಿಸುವುದರಿಂದ ಮಾತ್ರ ಈ ಭಾಗದ ಅಭಿವೃದ್ಧಿ ಸಾಧ್ಯವಿಲ್ಲ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ಕಾರ ವಿಶೇಷವಾಗಿ ಶ್ರಮಿಸಬೇಕು ಎಂದು ಭಗವಂತರಾಯ ಬೇಟೂರ ಆಗ್ರಹಿಸಿದರು.
ವಿಶ್ವಕರ್ಮ ಜಯಂತಿ ಕುರಿತು ಉಪನ್ಯಾಸ ನೀಡಿದ ಪಟ್ಟಣದ ಉಪನ್ಯಾಸಕ ಪತ್ತಾರ್, ವಿಶ್ವಕರ್ಮರು ಜಗತ್ತು ಕಂಡ ಮಹಾನ್ ವಾಸ್ತುಶಿಲ್ಪಿ ಹಾಗೂ ವಿನ್ಯಾಸಕಾರರಾಗಿದ್ದು, ಅವರ ಜೀವನ ಮತ್ತು ಸಾಧನೆಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಗದೀಶ ವಿಶ್ವಕರ್ಮ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿಚಂದ್ರ ರೆಡ್ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದಾನಪ್ಪಗೌಡ ಹಳಿಮನಿ, ಪೀಕಾಡ್ ಬ್ಯಾಂಕ್ ಅಧ್ಯಕ್ಷ ಪ್ರತಾಪ್ ಕಟ್ಟಿ, ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವನಗಿ, ಬಿಇಒ ವೀರಣ್ಣ ಬೊಮ್ಮನಹಳ್ಳಿ, ಸಮಾಜ ಕಲ್ಯಾಣ ಇಲಾಖೆಯ ಸತೀಶ ಸಂಗನ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಉಮೇಶ್ ಶರ್ಮಾ, ಬಿಸಿಎಂ ಇಲಾಖೆಯ ಬಸಮ್ಮ ಪಾಟೀಲ, ಪಶು ಸಂಗೋಪನಾ ಇಲಾಖೆಯ ಡಾ. ಶೋಭಾ ಸಜ್ಜನ್, ಎಡಿಎಲ್ಆರ್ ಸಿದ್ದಣ್ಣ ಹುಲಕಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಶಿಕ್ಷಕ ಗುರುಶಾಂತಪ್ಪ ಚಿಂಚೋಳಿ ಕಾರ್ಯಕ್ರಮ ನಿರೂಪಿಸಿದರು.



