ಮೊಗಲಾದಲ್ಲಿ ಕಳಪೆ ಕಾಮಗಾರಿ ಆರೋಪ: ತನಿಖೆಗೆ ಆಗ್ರಹ

“ಮೊಗಲಾ ಗ್ರಾಮದ ಅಭಿವೃದ್ಧಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೋಟಿ ಕೋಟಿ ರೂ. ಅನುದಾನ ನೀಡಿದ್ದಾರೆ, ಆದರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಗ್ರಾಮದ ಅಭಿವೃದ್ಧಿ ಶೂನ್ಯವಾಗಿದೆ.”-ಶರಣಬಸಪ್ಪ ಕೊಡಂಗಲ್, ಮೊಗಲಾ
ಚಿತ್ತಾಪುರ: ತಾಲೂಕಿನ ಮೊಗಲಾ ಗ್ರಾಮದ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳಡಿ ಬಿಡುಗಡೆಯಾದ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಕೈಗೊಂಡಿರುವ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಆರೋಪಿಸಿರುವ ಗ್ರಾಮಸ್ಥರು, ಕಾಮಗಾರಿಗಳ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಕಾರ್ಯಕರ್ತರಾದ ಶರಣಬಸಪ್ಪ ಕೊಡಂಗಲ್, ಬನ್ನೇಶ್ ಸುಲೇಗಾಂವ್ ಹಾಗೂ ಮಲ್ಲೇಶ್ ಕೆಂಪನೂರ, ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಎಸ್ಸಿಪಿ ಹಾಗೂ ಟಿಎಸ್ಪಿ ಯೋಜನೆಯಡಿ ₹35 ಲಕ್ಷ ವೆಚ್ಚದಲ್ಲಿ ಮೊಗಲಾ ಗ್ರಾಮದ ಎಸ್ಸಿ ಓಣಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಆದರೆ ಕೆಲವು ಕಡೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಹಲವೆಡೆ ಚರಂಡಿ ನಿರ್ಮಿಸಿಲ್ಲ. ನಿರ್ಮಿಸಿರುವ ಚರಂಡಿಗಳೂ ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಅವರು ದೂರಿದರು.
ಅದೇ ರೀತಿ ಜಿಲ್ಲಾ ಪಂಚಾಯಿತಿ ಹಾಗೂ ಪಿಆರ್ಇಡಿ ಯೋಜನೆಯಡಿ ₹1.15 ಕೋಟಿ ವೆಚ್ಚದಲ್ಲಿ ಗ್ರಾಮದ ಸಾಮಾನ್ಯ ಓಣಿಯಲ್ಲಿ ಕೈಗೊಂಡಿರುವ ಸಮಗ್ರ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಯಲ್ಲಿಯೂ ಲೋಪವಾಗಿದೆ ಎಂದು ಆರೋಪಿಸಿದರು. ರಸ್ತೆ ನಿರ್ಮಾಣಗೊಂಡು ತಿಂಗಳು ಕಳೆಯುವ ಮುನ್ನವೇ ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಚರಂಡಿ ಕಾಮಗಾರಿ ಪೂರ್ಣಗೊಳಿಸದೆ ಅರ್ಧಕ್ಕೆ ನಿಲ್ಲಿಸಿರುವುದರಿಂದ ಕೊಳಚೆ ನೀರು ಹೊಸದಾಗಿ ನಿರ್ಮಿಸಿದ ರಸ್ತೆಯ ಮೇಲೆಯೇ ಹರಿಯುತ್ತಿದೆ ಎಂದು ಹೇಳಿದರು.
ಇದರಿಂದ ವಯೋವೃದ್ಧರು ಹಾಗೂ ಮಕ್ಕಳು ರಸ್ತೆ ಮೇಲೆ ಜಾರಿಬಿದ್ದು ಗಾಯಗೊಳ್ಳುವ ಆತಂಕ ಎದುರಾಗಿದೆ. ಕಾಮಗಾರಿಗಳ ಕುರಿತು ಗುತ್ತಿಗೆದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನಿಸಿದರೂ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ಆರೋಪಿಸಿದರು.
ಈ ಕುರಿತು ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರ ವಿರುದ್ಧ ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕಾಮಗಾರಿಗಳ ಬಿಲ್ ತಡೆಹಿಡಿದು, ಗುಣಮಟ್ಟ ಪರಿಶೀಲನೆಯೊಂದಿಗೆ ಸಮಗ್ರ ತನಿಖೆ ನಡೆಸಬೇಕು ಎಂದು ಶರಣಬಸಪ್ಪ ಕೊಡಂಗಲ್, ಬನ್ನೇಶ್ ಸುಲೇಗಾಂವ್ ಹಾಗೂ ಮಲ್ಲೇಶ್ ಕೆಂಪನೂರ ಒತ್ತಾಯಿಸಿದರು.
“ಮೊಗಲಾ ಗ್ರಾಮದಲ್ಲಿ ಕೈಗೊಂಡ ಕಬ್ರಸ್ತಾನ ಕಾಂಪೌಂಡ್, ನಾರಾಯಣ ಗುರು ಸಮುದಾಯ ಭವನ ಮತ್ತು ಅಂಗನವಾಡಿ ಕೇಂದ್ರ ಕಾಮಗಾರಿಗಳು ಸಂಪೂರ್ಣ ಕಳಪೆ ಮಟ್ಟದಲ್ಲಿವೆ. ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು.”- ಬನ್ನೇಶ್ ಸುಲೇಗಾಂವ್, ಮಾಜಿ ಗ್ರಾ.ಪಂ. ಸದಸ್ಯ, ಮೊಗಲಾ.



