ಸಂವಿಧಾನ ರಕ್ಷಣೆಗೆ ಸಂಘಟಿತರಾಗಿ ಹೋರಾಡಬೇಕು: ಹೆಣೂರು ಶ್ರೀನಿವಾಸ್

ಕಲಬುರಗಿ: ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಅಪಾಯದ ಅಂಚಿನಲ್ಲಿದ್ದು, ಅದರ ರಕ್ಷಣೆಗೆ ದಲಿತ ಸಮುದಾಯದವರು ಜಾಗೃತರಾಗಿ ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಲಕ ಹೆಣೂರು ಶ್ರೀನಿವಾಸ್ ಕರೆ ನೀಡಿದರು.
ನಗರದ ಕನ್ನಡ ಭವನದಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಮಟ್ಟದ ಪದಾಧಿಕಾರಿಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಕಳೆದ ಐದು ದಶಕಗಳಿಂದ ರಾಜ್ಯದ 101 ಜಾತಿ ಸಮುದಾಯಗಳ ಪರವಾಗಿ ನಿರಂತರ ಹೋರಾಟ ನಡೆಸುತ್ತ ಬಂದಿದೆ. ಮಲ ಹೊರುವ ಪದ್ಧತಿ, ದೇವದಾಸಿ ಪದ್ಧತಿಯಂತಹ ಅನಿಷ್ಟ ಆಚರಣೆಗಳ ನಿರ್ಮೂಲನೆ ಸೇರಿದಂತೆ ಹಲವು ಸಾಮಾಜಿಕ ಹೋರಾಟಗಳಲ್ಲಿ ಸಂಘಟನೆಯ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು. ಕೋಮುವಾದಿ ಶಕ್ತಿಗಳ ವಿರುದ್ಧ ಸಂಘಟಿತರಾಗಿ ಸೆಣಸಾಡುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಮೀಸಲಾತಿ ಜಾರಿಗೆ ತರಲು ಪ್ರೊ. ಬಿ. ಕೃಷ್ಣಪ್ಪ ಅವರ ಕೊಡುಗೆ ಅಪಾರವಾಗಿದೆ. ಪರಿಶಿಷ್ಟರ ಅಭಿವೃದ್ಧಿಗಾಗಿ ಮೀಸಲಾದ ಹಣವನ್ನು ಅವರ ಕಲ್ಯಾಣಕ್ಕೆ ಮಾತ್ರ ಬಳಸಬೇಕು. ಆ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಾರ್ಯಾಗಾರದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಸುರೇಶ್ ಮೆಂಗನ್, ವಿಭಾಗೀಯ ಸಂಚಾಲಕ ಧರ್ಮಣ್ಣ ಕೋಣೇಕರ್, ಜಿಲ್ಲಾ ಸಂಚಾಲಕ ಭೀಮಶಾ ಖನ್ನಾ, ಶಿವಕುಮಾರ್ ಆಜಾದಪುರ, ದವಲಪ್ಪ ಮದನ್, ರಾಣು ಮುದ್ದನಕರ್, ಶ್ಯಾಮರಾಯ ಸಿಂಧೆ, ವಿಜಯಕುಮಾರ್ ಜೋಗುರ್, ವಿಜಯಕುಮಾರ್ ಟೈಗರ್, ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ಸವಿತಾ ತೀರ್ಥ, ಉಪ ವಿಭಾಗೀಯ ಸಂಚಾಲಕರಾದ ವಿಜಯಕುಮಾರ್ ಸಿಂಧೆ, ವಿಠಲ ತೇಗನೂರ್, ಗುಂಡಪ್ಪ ಮಂದೇವಾಲ್, ಜಗದೀಶ ಸಾಗರ, ಗೌತಮ್ ಉಪಾಧ್ಯಾಯ, ಭಾಗಣ್ಣ ಕಟ್ಟಿ ಸೇರಿದಂತೆ ವಿಭಾಗೀಯ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.



