ಪ್ರಧಾನಿ ವಿರುದ್ಧ ಏಕವಚನದ ಹೇಳಿಕೆ ಖಂಡನೀಯ: ದೇವೇಂದ್ರ ದೇಸಾಯಿ ಕಲ್ಲೂರ್

ಕಲಬುರಗಿ: ದೇಶದ ಪ್ರಧಾನಮಂತ್ರಿಯವರ ಕುರಿತು ಸಾರ್ವಜನಿಕವಾಗಿ ಮಾತನಾಡುವಾಗ ರಾಜಕಾರಣಿಗಳು ಜವಾಬ್ದಾರಿ ಹಾಗೂ ಸಂಯಮದಿಂದ ನಡೆದುಕೊಳ್ಳಬೇಕು. ರಾಜಕೀಯ ಭಿನ್ನಾಭಿಪ್ರಾಯಗಳು ಸಹಜವಾಗಿದ್ದರೂ, ಪ್ರಧಾನಮಂತ್ರಿಯವರನ್ನು ಏಕವಚನದಲ್ಲಿ ಉಲ್ಲೇಖಿಸುವುದು ಅಥವಾ ಅವಹೇಳನಕಾರಿ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಬಿಜೆಪಿ ಒಬಿಸಿ ಮೋರ್ಚಾ ನಗರಾಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ್ ಹೇಳಿದರು.
ಹಿರಿಯ ರಾಜಕಾರಣಿ ಬಿ.ಕೆ. ಹರಿಪ್ರಸಾದ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಏಕವಚನದಲ್ಲಿ ಉಲ್ಲೇಖಿಸಿ ಮಾತನಾಡಿರುವುದನ್ನು ಖಂಡಿಸಿದ ಅವರು, ಟೀಕೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಟೀಕೆ ನೀತಿ, ಆಡಳಿತ, ಅಭಿವೃದ್ಧಿ ಹಾಗೂ ಸಾರ್ವಜನಿಕ ವಿಚಾರಗಳ ಆಧಾರದಲ್ಲಿರಬೇಕು ಎಂದರು.
ವೈಯಕ್ತಿಕ ಜೀವನವನ್ನು ಗುರಿಯಾಗಿಸಿಕೊಂಡು ರಾಜಕೀಯ ಟೀಕೆ ಮಾಡುವುದು ರಾಜಕೀಯ ಚರ್ಚೆಯ ಘನತೆಯನ್ನು ಕುಗ್ಗಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಯಾವುದೇ ರಾಜಕೀಯ ನಾಯಕರ ವೈಯಕ್ತಿಕ ಜೀವನ ಅಥವಾ ವಿವಾಹದ ಕುರಿತು ಟೀಕೆ ಮಾಡುವ ಬದಲು ಅವರ ರಾಜಕೀಯ ನಿಲುವುಗಳು, ನೀತಿಗಳು ಹಾಗೂ ಸಾರ್ವಜನಿಕ ಕಾರ್ಯಗಳ ಕುರಿತು ಆರೋಗ್ಯಕರ ಚರ್ಚೆ ನಡೆಯಬೇಕು ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಹೆಸರಿನಲ್ಲಿ ರಾಜಕೀಯ ಸ್ಥಾನಮಾನ ಪಡೆದಿರುವ ನಾಯಕರು ಆ ಸಮುದಾಯಗಳ ಶಿಕ್ಷಣ, ಉದ್ಯೋಗ, ಆರ್ಥಿಕ ಅಭಿವೃದ್ಧಿ ಹಾಗೂ ರಾಜಕೀಯ ಪ್ರಾತಿನಿಧ್ಯದಂತಹ ನೈಜ ಸಮಸ್ಯೆಗಳತ್ತ ಹೆಚ್ಚಿನ ಗಮನ ಹರಿಸಬೇಕು. ಸರ್ಕಾರದ ಯೋಜನೆಗಳು ಮತ್ತು ಆಡಳಿತದ ಕುರಿತು ಭಿನ್ನಾಭಿಪ್ರಾಯಗಳಿದ್ದರೆ ಅಂಕಿ-ಅಂಶಗಳು ಹಾಗೂ ವಾಸ್ತವಾಂಶಗಳೊಂದಿಗೆ ಪ್ರಶ್ನಿಸಬೇಕು ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವದ ಆರೋಗ್ಯಕ್ಕಾಗಿ ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಪರಸ್ಪರ ಗೌರವ, ಸಂವಿಧಾನದ ಮೌಲ್ಯಗಳು ಹಾಗೂ ಸಾರ್ವಜನಿಕ ಚರ್ಚೆಯ ಘನತೆಯನ್ನು ಕಾಪಾಡಬೇಕು. ವೈಯಕ್ತಿಕ ವಿಚಾರಗಳ ಟೀಕೆಯಿಂದ ಯಾವುದೇ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ದೇವೇಂದ್ರ ದೇಸಾಯಿ ಕಲ್ಲೂರ್ ಮನವಿ ಮಾಡಿದರು.



