
ಕಲಬುರಗಿ: ಆಯುರ್ವೇದ ದಿನಾಚರಣೆ ಅಂಗವಾಗಿ ನಗರದ ಆನಂದ್ ಹೋಟೆಲ್ ಸಮೀಪದ ಎಸ್‌ಬಿ ಟೆಂಪಲ್ ರಸ್ತೆಯ ಡಾ. ಶೆಟ್ಟೀಸ್ ಆಯುರ್ ಕ್ಲಿನಿಕ್, ಆಯುರ್ವೇದ ಮತ್ತು ಪಂಚಕರ್ಮ ಕೇಂದ್ರದಲ್ಲಿ ಉಚಿತ ಆಯುರ್ವೇದ ಹಾಗೂ ಪಂಚಕರ್ಮ ಆರೋಗ್ಯ ಶಿಬಿರ ನಡೆಯಿತು.
ಶಿಬಿರದಲ್ಲಿ ಮಾತನಾಡಿದ ಡಾ. ರಕ್ಷಾ ಎಸ್. ಶೆಟ್ಟಿ, ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗನಿರೋಧಕ ಜೀವನಶೈಲಿ ಹಾಗೂ ಆರೋಗ್ಯಕರ ದಿನಚರಿ ರೂಢಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಆಯುರ್ವೇದ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತ ಪ್ರಕೃತಿ ವಿಶ್ಲೇಷಣೆ ಹಾಗೂ ನಾಡಿ ಪರೀಕ್ಷೆ ನಡೆಸಿ, ಮಧುಮೇಹ, ರಕ್ತದೊತ್ತಡ, ಸ್ಥೂಲಕಾಯ, ಸಂಧಿನೋವು, ಆಮ್ಲೀಯತೆ, ಚರ್ಮರೋಗ ಸೇರಿದಂತೆ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಆಯುರ್ವೇದ ವೈದ್ಯಕೀಯ ಸಲಹೆ ನೀಡಲಾಯಿತು.
ಅಭ್ಯಂಗ, ಶಿರೋಧಾರಾ, ನಸ್ಯ, ಕಟಿಬಸ್ತಿ ಸೇರಿದಂತೆ ವಿವಿಧ ಪಂಚಕರ್ಮ ಚಿಕಿತ್ಸಾ ವಿಧಾನಗಳ ಕುರಿತು ಮಾಹಿತಿ ನೀಡಲಾಯಿತು. ಫ್ಯಾಟಿ ಲಿವರ್, ಕಾಮಾಲೆ ಹಾಗೂ ಇತರ ಯಕೃತ್ ಸಂಬಂಧಿತ ಸಮಸ್ಯೆಗಳಿಗೆ ಆಯುರ್ವೇದ ಚಿಕಿತ್ಸಾ ವಿಧಾನಗಳು ಮತ್ತು ಲಿವರ್ ಡಿಟಾಕ್ಸ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.
6 ತಿಂಗಳಿಂದ 16 ವರ್ಷದ ಮಕ್ಕಳಿಗೆ ನೀಡಲಾಗುವ ಸುವರ್ಣ ಬಿಂದು ಪ್ರಾಶನದ ಕುರಿತು ಪೋಷಕರಿಗೆ ಮಾಹಿತಿ ನೀಡಲಾಯಿತು. ಚರ್ಮದ ಕಪ್ಪುಕಲೆ, ಹೈಪರ್‌ಪಿಗ್ಮೆಂಟೇಶನ್ ಸೇರಿದಂತೆ ಸೌಂದರ್ಯ ಸಂಬಂಧಿತ ಸಮಸ್ಯೆಗಳು, ಅಜೀರ್ಣ, ಮಲಬದ್ಧತೆ ಹಾಗೂ ಮನೋವಿಕಾರಗಳಿಗೆ ಆಯುರ್ವೇದ ಚಿಕಿತ್ಸಾ ವಿಧಾನಗಳ ಕುರಿತು ಮಾರ್ಗದರ್ಶನ ನೀಡಲಾಯಿತು.
ಸತ್ಯನಾಥ ಶೆಟ್ಟಿ, ವನಿತಾ ಚಂದ್ರಕಾಂತ ಗುತೇದಾರ್, ಜ್ಯೋತಿ ಅರುಣಕುಮಾರ ಪಾಟೀಲ, ಸ್ವಾತಿ ಮಾಳು ಹಾಗೂ ಡಾ. ಪಾರ್ವತಿ ಇದ್ದರು.



