ಕಲಬುರಗಿಜಿಲ್ಲೆ ಸುದ್ದಿರಾಯಚೂರು

ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಸ್ಪಷ್ಟತೆ ಅಗತ್ಯ: ಡಾ. ಅಜಯ್ ಸಿಂಗ್

ಕಲಬುರಗಿ, ಸೆ.30: ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಹಾಗೂ ನಿರ್ಧಾರ ಪ್ರಕ್ರಿಯೆ ಕುರಿತು ಸಾರ್ವಜನಿಕ ವಲಯದಲ್ಲಿ ಗಂಭೀರ ಪ್ರಶ್ನೆಗಳು ಎದ್ದಿರುವ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಜನತೆಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ, ಒಮ್ಮತ ಹಾಗೂ ಸಾರ್ವಜನಿಕ ವಿಶ್ವಾಸ ಅತ್ಯಂತ ಮುಖ್ಯ ಎಂದರು.

ಇದು ಯಾವುದೇ ಒಂದು ಪಕ್ಷಕ್ಕೆ ಸಂಬಂಧಿಸಿದ ಪ್ರಶ್ನೆಯಲ್ಲ. ಚುನಾವಣಾ ಪ್ರಕ್ರಿಯೆಯ ಮೇಲಿನ ಜನರ ವಿಶ್ವಾಸಕ್ಕೆ ಸಂಬಂಧಿಸಿದ ವಿಷಯವಾಗಿದೆ. ಆಯೋಗದೊಳಗಿನ ನಿರ್ಧಾರ ಪ್ರಕ್ರಿಯೆ ಕುರಿತು ಪ್ರಶ್ನೆಗಳು ಎದುರಾದಾಗ ಸಾರ್ವಜನಿಕರಿಗೆ ಸ್ಪಷ್ಟನೆ ನೀಡುವುದು ಮುಖ್ಯ ಚುನಾವಣಾ ಆಯುಕ್ತರ ಜವಾಬ್ದಾರಿ ಎಂದು ಹೇಳಿದರು.

ಇತ್ತೀಚಿನ ಮಾಧ್ಯಮ ವರದಿಗಳಲ್ಲಿ ಚುನಾವಣಾ ಆಯೋಗದ ಇಬ್ಬರು ಸದಸ್ಯರು ಕೆಲವು ಕ್ರಮಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳು ಬಂದಿವೆ. ಆದರೆ, ಚುನಾವಣಾ ಆಯೋಗವು ಅಂತಿಮ ನಿರ್ಧಾರಗಳನ್ನು ಇಡೀ ಆಯೋಗದ ಒಮ್ಮತದ ತೀರ್ಮಾನಗಳಾಗಿ ಕೈಗೊಳ್ಳುತ್ತದೆ ಹಾಗೂ ಆಂತರಿಕ ಭಿನ್ನಾಭಿಪ್ರಾಯಗಳು ಚರ್ಚಾ ಪ್ರಕ್ರಿಯೆಯ ಭಾಗವಾಗಿವೆ ಎಂದು ಸ್ಪಷ್ಟಪಡಿಸಿದೆ ಎಂದು ಅವರು ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸಾಂವಿಧಾನಿಕ ಸಂಸ್ಥೆಯೂ ಸಾರ್ವಜನಿಕ ಪ್ರಶ್ನೆಗಳಿಗೆ ಉತ್ತರದಾಯಿಯಾಗಿರಬೇಕು. ಜನರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಹಾಗೂ ಚುನಾವಣಾ ಪ್ರಕ್ರಿಯೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಆಯೋಗ ಕಾರ್ಯನಿರ್ವಹಿಸಬೇಕು ಎಂದು ಡಾ. ಅಜಯ್ ಸಿಂಗ್ ಹೇಳಿದರು.

ಪ್ರಸ್ತುತ ಉದ್ಭವಿಸಿರುವ ವಿವಾದಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು. ಚುನಾವಣಾ ಆಯೋಗದ ಮೇಲಿನ ಸಾರ್ವಜನಿಕ ವಿಶ್ವಾಸ ಉಳಿಯಬೇಕಾದರೆ ನಿರ್ಧಾರಗಳು ಪಾರದರ್ಶಕವಾಗಿರಬೇಕು ಮತ್ತು ಉದ್ಭವಿಸುವ ಪ್ರಶ್ನೆಗಳಿಗೆ ಸಾರ್ವಜನಿಕವಾಗಿ ಸ್ಪಷ್ಟನೆ ದೊರೆಯಬೇಕು ಎಂದು ಒತ್ತಾಯಿಸಿದರು.

janabhipraya

https://janabhipraya.com

Related Articles

Leave a Reply

Your email address will not be published. Required fields are marked *

Back to top button