ಯಾದಗಿರಿ

ಕೆಂಭಾವಿಯಲ್ಲಿ ಸಿಪಿಐ ವೃತ್ತ ಕಚೇರಿ ಆರಂಭಕ್ಕೆ ಆಗ್ರಹ

ಅಕ್ಟೋಬರ್ 21ರಂದು ಕೆಂಭಾವಿ ಬಂದ್‌ ಎಚ್ಚರಿಕೆ

ಕೆಂಭಾವಿ: ಪ್ರಮುಖ ಹೋಬಳಿ ಕೇಂದ್ರವಾಗಿರುವ ಕೆಂಭಾವಿಯಲ್ಲೇ ಪೊಲೀಸ್ ಇನ್‌ಸ್ಪೆಕ್ಟರ್‌ (ಸಿಪಿಐ) ವೃತ್ತ ಕಚೇರಿ ಆರಂಭಿಸಬೇಕು ಎಂದು ಆಗ್ರಹಿಸಿ ‘ನಮ್ಮ ಕರ್ನಾಟಕ ಸೇನೆ’ ವತಿಯಿಂದ ಶಹಾಪುರ ಶಾಸಕ ಹಾಗೂ ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಮನವಿ ಸಲ್ಲಿಸಲಾಯಿತು.

ಕೆಂಭಾವಿ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು, ಸುಸಜ್ಜಿತ ಪೊಲೀಸ್ ಠಾಣೆಯ ಜತೆಗೆ ಇಬ್ಬರು ಪಿಎಸ್‌ಐಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಕೆಂಭಾವಿ ವೃತ್ತದ ಕಾರ್ಯಕ್ಷೇತ್ರವನ್ನು ಶಹಾಪುರಕ್ಕೆ ಸೇರಿಸಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರು ಪೊಲೀಸ್ ಇಲಾಖೆಯ ಕೆಲಸಗಳಿಗಾಗಿ ತೊಂದರೆ ಅನುಭವಿಸುವಂತಾಗಿದೆ ಎಂದು ಸಂಘಟನೆ ತಿಳಿಸಿದೆ.

ಸಣ್ಣಪುಟ್ಟ ದೂರುಗಳು ಹಾಗೂ ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗಾಗಿ ಸುಮಾರು 45ರಿಂದ 55 ಕಿ.ಮೀ. ದೂರದ ಶಹಾಪುರಕ್ಕೆ ತೆರಳಬೇಕಿದ್ದು, ಕೂಲಿ ಕಾರ್ಮಿಕರು ಸೇರಿದಂತೆ ಸಾರ್ವಜನಿಕರು ದಿನವಿಡೀ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕೆಂಭಾವಿಯಲ್ಲೇ ದೊಡ್ಡ ಪೊಲೀಸ್ ಠಾಣೆ ಇರುವುದರಿಂದ ಇಲ್ಲಿಯೇ ಸಿಪಿಐ ವೃತ್ತ ಕಚೇರಿ ಆರಂಭಿಸಿದರೆ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜತೆಗೆ ಸಾರ್ವಜನಿಕರಿಗೆ ಪೊಲೀಸ್ ಸೇವೆಗಳು ತ್ವರಿತವಾಗಿ ದೊರೆಯಲಿವೆ. ಹೀಗಾಗಿ ಜನಸಾಮಾನ್ಯರ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ಕೆಂಭಾವಿಯಲ್ಲಿ ಸಿಪಿಐ ವೃತ್ತ ಕಚೇರಿ ಮಂಜೂರು ಮಾಡಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಅಕ್ಟೋಬರ್ 21ರಂದು ‘ಕೆಂಭಾವಿ ಬಂದ್’ ನಡೆಸಿ ಬೃಹತ್ ಪ್ರತಿಭಟನೆ ಹಾಗೂ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ನಮ್ಮ ಕರ್ನಾಟಕ ಸೇನೆಯ ಕೆಂಭಾವಿ ಹೋಬಳಿ ಕಾರ್ಮಿಕ ಘಟಕದ ಅಧ್ಯಕ್ಷ ಗುರುರಾಜ್ ಎಸ್. ಅಂಗಡಿ ಎಚ್ಚರಿಕೆ ನೀಡಿದ್ದಾರೆ.

janabhipraya

https://janabhipraya.com

Related Articles

Leave a Reply

Your email address will not be published. Required fields are marked *

Back to top button