ಕಲಬುರಗಿಜಿಲ್ಲೆ ಸುದ್ದಿ

ನ.1ರಂದು ಕೋಲಿ, ಕಬ್ಬಲಿಗ ನೌಕರರ ಸಮಾವೇಶ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕಲಬುರಗಿ, ಅ.2: ಜಿಲ್ಲಾ ಕೋಲಿ, ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನವೆಂಬರ್ 1ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಕೋಲಿ, ಕಬ್ಬಲಿಗ ನೌಕರರ ಸಮಾವೇಶ, ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ನೂತನ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ನೀಲಕಂಠ ಎಂ. ಜಮಾದಾರ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಬಿಎಸ್‌ಇ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ದ್ವಿತೀಯ ವರ್ಷದ ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ನಗದು ಬಹುಮಾನಗಳೊಂದಿಗೆ ಅಭಿನಂದನಾ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು ಎಂದರು.

ರಾಜ್ಯದ ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಕಾರ್ಯಕ್ರಮ ಉದ್ಘಾಟಿಸುವರು. ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು. ನೂತನ ಸದಸ್ಯರ ಗುರುತಿನ ಚೀಟಿಗಳನ್ನು ಸಮಾಜದ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ. ಶ್ರೀನಿವಾಸ್ ಬಿಡುಗಡೆ ಮಾಡುವರು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕರಾದ ಎಂ.ವೈ. ಪಾಟೀಲ, ಬಸವರಾಜ ಮತ್ತಿಮೂಡ, ಅಲ್ಲಮಪ್ರಭು ಪಾಟೀಲ ಹಾಗೂ ಜಗದೇವ ಗುತ್ತೇದಾರ್ ಭಾಗವಹಿಸುವರು. ಡಾ. ಮಲ್ಲಿಕಾರ್ಜುನ ಮುಕ್ಕಾ ಹಾಗೂ ಆನಂದ ರಟಕಲ್ ಅತಿಥಿಗಳಾಗಿ ಪಾಲ್ಗೊಳ್ಳುವರು.

ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ತಿಪ್ಪಣ್ಣಪ್ಪ ಕಮಕನೂರು, ಜವಾಹರ ಬಾಲಭವನದ ಉಪಾಧ್ಯಕ್ಷ ಅನಿಲ್ ದೇವೇಂದ್ರಪ್ಪ ಘಾಳಪ್ಪ ಜಮಾದಾರ್ ಹಾಗೂ ಮಾಲಾ ಬಿ. ನಾರಾಯಣರಾವ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಡಾಕ್ಟರೇಟ್ ಪದವಿ ಪಡೆದ ಸಾಧಕರು, ವಿಶೇಷ ಸಾಧನೆ ಮಾಡಿದ ನೌಕರರು ಹಾಗೂ ನಿವೃತ್ತ ನೌಕರರನ್ನೂ ಗೌರವಿಸಲಾಗುವುದು ಎಂದರು.

ಸಮಾವೇಶದಲ್ಲಿ ಕೋಲಿ, ಕಬ್ಬಲಿಗ ನೌಕರರ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲಾಗುವುದು. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಹಾಗೂ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಯೋಜನೆ ರೂಪಿಸಲಾಗುವುದು ಎಂದು ನೀಲಕಂಠ ಜಮಾದಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಾಮದೇವ್ ಕಡಕೋಳ, ಧರ್ಮರಾಜ್ ಜವಳಿ, ಚಂದ್ರಕಾಂತ ತಳವಾರ, ತುಕಾರಾಮ್ ಚಿತ್ತಾಪುರ, ಸಿದ್ದಪ್ಪ ಜಿ. ಮಹಾಗಾಂವ್, ಸಂತೋಷಕುಮಾರ್ ಬೆಳಗುಂಪಿ, ರಾಜೇಂದ್ರ ಝಳಕಿ ಹಾಗೂ ಚಂದ್ರಶೇಖರ್ ಇಟಕಾಲ್ ಉಪಸ್ಥಿತರಿದ್ದರು.

janabhipraya

https://janabhipraya.com

Related Articles

Leave a Reply

Your email address will not be published. Required fields are marked *

Back to top button