ತತ್ವಪದಕಾರರ ಪ್ರಾಧಿಕಾರ ರಚನೆಗೆ ಆಗ್ರಹ

ಜೇವರ್ಗಿ: ಕರ್ನಾಟಕದಲ್ಲಿ ಈಗಾಗಲೇ ವಿವಿಧ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳ ಮಾದರಿಯಲ್ಲಿ ತತ್ವಪದಕಾರರ ಪ್ರಾಧಿಕಾರವನ್ನು ರಚಿಸಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಸದಸ್ಯ ಪ್ರಕಾಶ ಅಂಗಡಿ ಕನೇಳ್ಳಿ ಆಗ್ರಹಿಸಿದರು.
ಜೇವರ್ಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಹಾಗೂ ಸ್ಪಂದನ ಮಹಿಳಾ ಮತ್ತು ಮಕ್ಕಳ ಸೇವಾ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಜೇವರ್ಗಿ ತಾಲ್ಲೂಕಿನ ತತ್ವಪದಕಾರರ ಕುರಿತ ಒಂದು ದಿನದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಜೇವರ್ಗಿ ತಾಲ್ಲೂಕು ತತ್ವಪದಕಾರರ ಮಹಾಕ್ರಾಂತಿಯ ನೆಲವಾಗಿದೆ. ನಾಡಿನ ತತ್ವಪದ ಪರಂಪರೆಗೆ ಜೇವರ್ಗಿ ತಾಲ್ಲೂಕಿನ ಕೊಡುಗೆ ಅನನ್ಯವಾಗಿದೆ. ಕಡಕೋಳ ಮಡಿವಾಳಪ್ಪ, ಚನ್ನೂರಿನ ಜಾಲಾಲಸಾಬ್, ಕೈನೂರಿನ ಕೃಷ್ಣಪ್ಪ, ಕಡ್ಲೇವಾಡದ ಸಿದ್ದಪ್ಪ, ರಾಮಪುರದ ಬಕ್ಕಪ್ಪಯ್ಯ ಸೇರಿದಂತೆ ಅನೇಕ ತತ್ವಪದಕಾರರು ಈ ನೆಲದಲ್ಲಿ ತತ್ವಪದಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದ್ದಾರೆ ಎಂದು ಹೇಳಿದರು.
ಈ ಎಲ್ಲ ತತ್ವಪದಕಾರರ ಕೃತಿಗಳನ್ನು ಸರ್ಕಾರದಿಂದ ದಾಖಲಿಸಿ ಸಂರಕ್ಷಿಸಬೇಕು. ಜೇವರ್ಗಿ ತಾಲ್ಲೂಕಿನ ತತ್ವಪದಕಾರರ ಕುರಿತು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಕೇಂದ್ರ ಆರಂಭಿಸಬೇಕು. ಕಡಕೋಳ ಮಡಿವಾಳಪ್ಪ ಅವರ ಹೆಸರಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯಲ್ಲಿ ಸರ್ಕಾರದ ದತ್ತಿ ಪ್ರಶಸ್ತಿ ಆರಂಭಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಟ್ರಸ್ಟ್–ಪ್ರತಿಷ್ಠಾನಗಳ ಮಾದರಿಯಲ್ಲಿ ಕಡಕೋಳ ಮಡಿವಾಳಪ್ಪ ಅವರ ಹೆಸರಿನಲ್ಲಿ ಸರ್ಕಾರದಿಂದ ಟ್ರಸ್ಟ್ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್. ನಿರಗುಡಿ, ವಿದ್ಯಾರ್ಥಿಗಳು ತತ್ವಪದಕಾರರ ಸಾಹಿತ್ಯದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಅಧ್ಯಯನ ಮಾಡಬೇಕು. ಎಂಫಿಲ್ ಮತ್ತು ಪಿಎಚ್ಡಿ ಸಂಶೋಧನೆ ನಡೆಸುವ ವಿದ್ಯಾರ್ಥಿಗಳು ಜೇವರ್ಗಿ ತಾಲ್ಲೂಕಿನ ತತ್ವಪದಕಾರರ ಕುರಿತು ವಿಶೇಷ ಅಧ್ಯಯನ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಜಾನಪದ ಪರಿಷತ್ತಿನ ಕಲಬುರಗಿ ಜಿಲ್ಲಾ ಅಧ್ಯಕ್ಷ ಸಿ.ಎಸ್. ಮಾಲಿ ಪಾಟೀಲ್ ಮಾತನಾಡಿ, ಜಾನಪದ ತತ್ವಪದ ಸಾಹಿತ್ಯವು ನಮ್ಮ ತಲೆಮಾರಿನ ಅಮೂಲ್ಯ ಆಸ್ತಿಯಾಗಿದೆ. ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತರಾಗದೆ ಪಠ್ಯೇತರ ವಿಷಯಗಳು ಹಾಗೂ ಇತಿಹಾಸದ ಕುರಿತು ಹೆಚ್ಚಿನ ಅಧ್ಯಯನ ಮಾಡಬೇಕು. ಸರ್ಕಾರ ತತ್ವಪದಕಾರರನ್ನು ಗುರುತಿಸಿ ಗೌರವಿಸಬೇಕು. ಜೇವರ್ಗಿ ತಾಲ್ಲೂಕಿನ ಸಮಗ್ರ ತತ್ವಪದ ಸಾಹಿತ್ಯವನ್ನು ಸಂಪುಟಗಳ ರೂಪದಲ್ಲಿ ಪ್ರಕಟಿಸಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯೆ ಡಾ. ಶಾಂತಾ ಬಿ. ಅಷ್ಟಗಿ ಅಧ್ಯಕ್ಷತೆ ವಹಿಸಿದ್ದರು. ಸ್ಪಂದನ ಮಹಿಳಾ ಮತ್ತು ಮಕ್ಕಳ ಸೇವಾ ಸಂಸ್ಥೆಯ ಅಧ್ಯಕ್ಷ ಕಾಶೀನಾಥ ಮಂದೇವಾಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂತರ ನಡೆದ ವಿಚಾರ ಸಂಕಿರಣದ ಮೊದಲ ಗೋಷ್ಠಿಯಲ್ಲಿ ಜೇವರ್ಗಿ ತಾಲ್ಲೂಕಿನ ತತ್ವಪದಕಾರರ ಕುರಿತು ಸಾಹಿತಿ ಡಾ. ಧರ್ಮಣ್ಣ ಬಡಿಗೇರ ಉಪನ್ಯಾಸ ನೀಡಿದರು. ಹಿರಿಯ ಸಾಹಿತಿ ಡಾ. ಗೋವಿಂದರಾಜ ಆಳಂದಾಳ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ನಾಗಣ್ಣ ಕಿಲಾರಿ ಸಮಾರೋಪ ನುಡಿಗಳನ್ನಾಡಿದರು. ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಖಾಜಾವಲಿ ಈಚನಾಳ ಹಾಗೂ ಶ್ರೀ ಭೀಮಣ್ಣ ಬೇಡಕಪಳ್ಳಿಯವರು ಉಪಸ್ಥಿತರಿದ್ದರು.
ಆಕಾಶವಾಣಿ ಕಲಾವಿದರಾದ ಮನೋಹರ ವಿಶ್ವಕರ್ಮ ಸಾಗರ ಹಾಗೂ ಬಸವರಾಜ ಜಾಯಿ ತಾಂಡದವರು ಕಡಕೋಳ ಮಡಿವಾಳಪ್ಪ ಅವರ ತತ್ವಪದಗಳನ್ನು ಸುಮಧುರವಾಗಿ ಹಾಡಿದರು. ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಸುಮಾರು 300 ವಿದ್ಯಾರ್ಥಿಗಳಿಗೆ ಪ್ರಾಧಿಕಾರದ ವತಿಯಿಂದ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಡಾ. ಖಾಜಾವಲಿ ಈಚನಾಳ ನಿರೂಪಿಸಿ ವಂದಿಸಿದರು.



