ಕಲಬುರಗಿಜಿಲ್ಲೆ ಸುದ್ದಿ

ಗಾಣದೇವತೆ ಮೂರ್ತಿ ಮರುಸ್ಥಾಪನೆಗೆ ಆಗ್ರಹ: ಸುರೇಶ ಪಾಟೀಲ ನೇದಲಗಿ

ಜೇವರ್ಗಿ, ಅ.4: ವಿಜಯಪುರ ಜಿಲ್ಲೆಯ ಬಸವನಭಾಗೇವಾಡಿ ತಾಲ್ಲೂಕಿನ ನಂದಿಹಾಳ ಗ್ರಾಮದಲ್ಲಿ 14 ವರ್ಷಗಳಿಂದ ಇದ್ದ ಗಾಣಿಗರ ಆರಾಧ್ಯ ದೇವತೆ ಗಾಣದೇವತೆ ಮೂರ್ತಿಯನ್ನು ಕೆಲವರು ರಾತ್ರಿ ವೇಳೆ ತೆರವುಗೊಳಿಸಿರುವುದನ್ನು ಖಂಡಿಸಿ, ಅದೇ ಸ್ಥಳದಲ್ಲಿ ಮೂರ್ತಿಯನ್ನು ಮರುಸ್ಥಾಪಿಸಬೇಕು ಎಂದು ಜೇವರ್ಗಿ ತಾಲ್ಲೂಕು ಗಾಣಿಗರ ಸಮಾಜದ ಅಧ್ಯಕ್ಷ ಸುರೇಶ ಪಾಟೀಲ ನೇದಲಗಿ ಆಗ್ರಹಿಸಿದರು.

ಪತ್ರಿಕಾ ಪ್ರಕಟಣೆಯಲ್ಲಿ ಮಾತನಾಡಿದ ಅವರು, ಎಲ್ಲ ಸಮುದಾಯಗಳನ್ನು ಗೌರವಿಸಿ, ತನ್ನ ಸಮುದಾಯದ ಆರಾಧ್ಯ ದೇವತೆಯನ್ನು ಪೂಜಿಸಿಕೊಂಡು ಬರುತ್ತಿರುವ ಗಾಣಿಗರ ಸಮಾಜದ ಭಾವನೆಗಳಿಗೆ ಮೂರ್ತಿ ತೆರವುಗೊಳಿಸಿರುವ ಘಟನೆ ಧಕ್ಕೆ ಉಂಟುಮಾಡಿದೆ ಎಂದು ಹೇಳಿದರು.

ಮೂರ್ತಿ ತೆರವುಗೊಳಿಸಿದ ಬಳಿಕ ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಸಮಾಜ ಬಾಂಧವರು ನಂದಿಹಾಳ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಸಮಸ್ಯೆಯನ್ನು ಒಂದು ವಾರದೊಳಗೆ ಬಗೆಹರಿಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದ್ದರಿಂದ ಗಾಣಿಗರ ಸಮಾಜದವರು ಪ್ರತಿಭಟನೆ ಹಿಂಪಡೆದಿದ್ದರು.

ಆದರೆ, ತಿಂಗಳು ಕಳೆದರೂ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಮಾಜದವರು ಆಗಮಿಸಿ ಉಗ್ರ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.

ಗಾಣಿಗರ ಸ್ವಾಭಿಮಾನದ ಪ್ರತೀಕವಾಗಿರುವ ಗಾಣದೇವತೆ ಮೂರ್ತಿಯನ್ನು ತೆರವುಗೊಳಿಸಿದ ಸ್ಥಳದಲ್ಲಿಯೇ ಮರುಸ್ಥಾಪಿಸಬೇಕು. ಈ ಕುರಿತು ನಿರ್ಲಕ್ಷ್ಯದ ಧೋರಣೆ ಮುಂದುವರಿದರೆ ರಾಜ್ಯದಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸುರೇಶ ಪಾಟೀಲ ನೇದಲಗಿ ಎಚ್ಚರಿಕೆ ನೀಡಿದರು.

janabhipraya

https://janabhipraya.com

Related Articles

Leave a Reply

Your email address will not be published. Required fields are marked *

Back to top button