ಮಹಿಳೆ ಮೇಲೆ ದೌರ್ಜನ್ಯ ಆರೋಪ: ಹಾಸ್ಟೆಲ್ ಮಾಲೀಕನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಕಲಬುರಗಿ: ನಗರದ ಹೊರವಲಯದ ಸೈಯದ್ ಚಿಂಚೋಳಿ ಕ್ರಾಸ್ ಬಳಿಯ ಮಹಾದೇವಿ ತಾಯಿ ಶಕ್ತಿ ಸದನ ಗೃಹ ಹಾಸ್ಟೆಲ್ನ ಮಾಲೀಕ ಹಾಗೂ ಕಾರ್ಯನಿರ್ವಾಹಕ ಅನಂತರಾಜು ಅವರು ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಅಹಿಂದ ಜನಸಂಘದ ಶ್ರೀಮತಿ ಜಯಶ್ರೀ ಕಟ್ಟಿಮನಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಫಜಲಪುರ ತಾಲ್ಲೂಕಿನ ಬಳೂರ್ಗಿ ಗ್ರಾಮದ ರೇಣುಕಾ ಗುರುಶಾಂತ ಪಾಟೀಲ ಅವರು ಕೌಟುಂಬಿಕ ಕಲಹದಿಂದ ಬೇಸತ್ತು ಹಾಸ್ಟೆಲ್ಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಹಾಸ್ಟೆಲ್ ಮಾಲೀಕ ಅನಂತರಾಜು ಅವರು ಅವರಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಅನಂತರಾಜು ಅವರು ಅಸಭ್ಯವಾಗಿ ನಿಂದಿಸುವುದು, ಕೂದಲು ಹಿಡಿದು ಎಳೆದಾಡಿ ಹಾಸ್ಟೆಲ್ನಿಂದ ಹೊರಹಾಕುವುದು, ಲೈಂಗಿಕ ಕ್ರಿಯೆಗೆ ಕರೆಯುವುದು ಹಾಗೂ ಬೆದರಿಕೆ ಹಾಕಿದ್ದಾರೆ ಎಂದು ರೇಣುಕಾ ಆರೋಪಿಸಿದ್ದಾರೆ. ಈ ಕುರಿತು ಹಾಸ್ಟೆಲ್ ವಾರ್ಡನ್ ಕಾಶೀಬಾಯಿ ಅವರ ತಂದೆ ಶಾಂತಪ್ಪ ಅವರಿಗೆ ದೂರು ನೀಡಲಾಗಿತ್ತು. ಬಳಿಕ ಅನಂತರಾಜು ಅವರು ಕಾಶೀಬಾಯಿ ಅವರಿಗೂ ಅಸಭ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿ ಹಾಸ್ಟೆಲ್ನಿಂದ ಹೊರಹಾಕಿದ್ದಾರೆ ಎಂದು ದೂರಲಾಗಿದೆ.
ಈ ಪ್ರಕರಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ಸಮಗ್ರ ತನಿಖೆ ನಡೆಸಬೇಕು. ತನಿಖೆಯಲ್ಲಿ ಆರೋಪಗಳು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಯಶ್ರೀ ಕಟ್ಟಿಮನಿ ಒತ್ತಾಯಿಸಿದರು.
ಯಾವುದೇ ಅಧಿಕಾರಿ ಅಥವಾ ಸಂಸ್ಥೆಯ ವ್ಯಕ್ತಿ ತನಿಖೆಗೆ ಅಡ್ಡಿಪಡಿಸಿದರೆ ಅವರ ವಿರುದ್ಧವೂ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಈ ಕುರಿತು ಮಹಿಳಾ ಆಯೋಗಕ್ಕೂ ದೂರು ಸಲ್ಲಿಸಿ, ಆಯೋಗದ ವತಿಯಿಂದ ಸೂಕ್ತ ತನಿಖೆ ಹಾಗೂ ಶಿಫಾರಸುಗಳನ್ನು ಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಮಹಿಳೆಯರು ಮತ್ತು ಬಾಲಕಿಯರ ಸುರಕ್ಷತೆಗಾಗಿ ಕಾರ್ಯನಿರ್ವಹಿಸುವ ಸಂಸ್ಥೆಯೇ ಭಯದ ಸ್ಥಳವಾಗಬಾರದು. ಹೀಗಾಗಿ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಯಾವುದೇ ಪ್ರಭಾವಕ್ಕೆ ಒಳಗಾಗದೆ ಸಮಗ್ರ ತನಿಖೆ ನಡೆಸಬೇಕು. ಆರೋಪಗಳು ಸತ್ಯವೆಂದು ದೃಢಪಟ್ಟಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ತನಿಖೆಯ ಫಲಿತಾಂಶವನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ತಿಳಿಸಬೇಕು ಎಂದು ಅವರು ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಅನುದಾನಿತ ಸಂಸ್ಥೆಗಳ ಮೇಲ್ವಿಚಾರಣಾ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದೂರುದಾರರಾದ ರೇಣುಕಾ ಗುರುಶಾಂತ ಪಾಟೀಲ, ಶರಣಮ್ಮ, ಕಾಶೀಬಾಯಿ ಅವರ ತಂದೆ ಶಾಂತಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.



