ಕಲಬುರಗಿಜಿಲ್ಲೆ ಸುದ್ದಿ

ಜ್ಞಾನೇಶಕುಮಾರ್ ವಜಾಕ್ಕೆ ಆಗ್ರಹಿಸಿ ಜೇವರ್ಗಿಯಲ್ಲಿ ಪ್ರತಿಭಟನೆ

ಜೇವರ್ಗಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು, ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಹಾಗೂ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಅರ್ಹರ ಹೆಸರುಗಳನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಭವನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ವಿಜಯಪುರ ಕ್ರಾಸ್‌ವರೆಗೆ ಸಾಗಿತು. ಬಳಿಕ ಆಯುಕ್ತ ಜ್ಞಾನೇಶಕುಮಾರ್ ಅವರ ಪ್ರತಿಕೃತಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಗತಿಪರ ಸಂಘಟನೆಗಳ ಮುಖಂಡರಾದ ಮಹೇಶ್ ರಾಠೋಡ್ ಹಾಗೂ ಇಬ್ರಾಹಿಂ ಪಟೇಲ್ ಯಾಳವಾರ, ‘ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಹಲವು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಎಸ್‌ಐಆರ್‌ ಹೆಸರಿನಲ್ಲಿ ಅರ್ಹ ಮತದಾರರ ಹಕ್ಕುಗಳಿಗೆ ಧಕ್ಕೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಸೆಪ್ಟೆಂಬರ್ 23ರಂದು ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ವರದಿಗಳು ಸೇರಿದಂತೆ ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಕುರಿತು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳು ವ್ಯಕ್ತವಾಗಿವೆ. ಎಸ್‌ಐಆರ್‌ ಪ್ರಕ್ರಿಯೆಯನ್ನು ನಿಲ್ಲಿಸಿ, ತಪ್ಪಾಗಿ ಪಟ್ಟಿಯಿಂದ ಹೊರಗುಳಿದಿರುವ ಮತದಾರರ ಹೆಸರುಗಳನ್ನು ಮರುಸ್ಥಾಪಿಸಬೇಕು’ ಎಂದು ಅವರು ಒತ್ತಾಯಿಸಿದರು.

ಮುಖಂಡ ಸಿದ್ದರಾಮ ಕಟ್ಟಿಬಾಬು ಬಿ. ಪಾಟೀಲ ಮಾತನಾಡಿ, ‘ಚುನಾವಣಾ ಆಯುಕ್ತರಾಗಿ ಜ್ಞಾನೇಶಕುಮಾರ್ ಅವರ ಅವಧಿಯಲ್ಲಿ ಕೈಗೊಳ್ಳಲಾದ ಕೆಲವು ನಿರ್ಧಾರಗಳ ಕುರಿತು ಆಕ್ಷೇಪಗಳು ವ್ಯಕ್ತವಾಗಿವೆ. ಮತದಾರರ ನೋಂದಣಿ, ಹೆಸರುಗಳ ಸೇರ್ಪಡೆ–ತೆಗೆದುಹಾಕುವಿಕೆ ಹಾಗೂ ಮರುಸ್ಥಾಪನೆಗೆ ಸಂಬಂಧಿಸಿದ ಪ್ರಕ್ರಿಯೆಗಳು ಪಾರದರ್ಶಕವಾಗಿರಬೇಕು’ ಎಂದು ಹೇಳಿದರು.

‘ಇಬ್ಬರು ಚುನಾವಣಾ ಆಯುಕ್ತರು ಕನಿಷ್ಠ 14 ಸಂದರ್ಭಗಳಲ್ಲಿ ಮತದಾರರ ನೋಂದಣಿ, ಹೆಸರುಗಳ ಅಳಿಸುವಿಕೆ, ಮರುಸ್ಥಾಪನೆ ಹಾಗೂ ಎಸ್‌ಐಆರ್‌ ಪ್ರಕ್ರಿಯೆಗೆ ಸಂಬಂಧಿಸಿದ ನಿರ್ಧಾರಗಳ ಕುರಿತು ಆಕ್ಷೇಪ ದಾಖಲಿಸಿದ್ದಾರೆ. ತಮ್ಮ ಒಪ್ಪಿಗೆಯಿಲ್ಲದೆ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ’ ಎಂದು ಅವರು ಹೇಳಿದರು.

ಪ್ರತಿಭಟನಾಕಾರರು, ‘ಮತದಾರರ ದತ್ತಾಂಶದ ಕೇಂದ್ರೀಕರಣ ಹಾಗೂ ರಾಜ್ಯ ಮತ್ತು ಕ್ಷೇತ್ರ ಮಟ್ಟದ ಅಧಿಕಾರಿಗಳ ಪ್ರವೇಶಕ್ಕೆ ಸಂಬಂಧಿಸಿದ ನಿಯಮಗಳ ಕುರಿತು ಸ್ಪಷ್ಟತೆ ಅಗತ್ಯ. ಚುನಾವಣಾ ಪ್ರಕ್ರಿಯೆಯಲ್ಲಿನ ಪಾರದರ್ಶಕತೆ ಮತ್ತು ವಿಕೇಂದ್ರೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕು’ ಎಂದು ಒತ್ತಾಯಿಸಿದರು.

‘ಎಸ್‌ಐಆರ್‌ ಪ್ರಕ್ರಿಯೆಯು ಮತದಾನದ ಹಕ್ಕಿಗೆ ಸಂಬಂಧಿಸಿದ ಮೂಲಭೂತ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮತದಾರರ ಪಟ್ಟಿಯಿಂದ ಅರ್ಹರ ಹೆಸರುಗಳು ತಪ್ಪಾಗಿ ಹೊರಗುಳಿಯದಂತೆ ಖಚಿತಪಡಿಸಬೇಕು. ಚುನಾವಣಾ ಆಯೋಗದ ಸ್ವತಂತ್ರ ಹಾಗೂ ಪಾರದರ್ಶಕ ಕಾರ್ಯನಿರ್ವಹಣೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಕಾಪಾಡಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜ್ಞಾನೇಶಕುಮಾರ್ ಅವರನ್ನು ಹುದ್ದೆಯಿಂದ ತೆರವುಗೊಳಿಸಬೇಕು, ಎಸ್‌ಐಆರ್‌ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಮತ್ತು ಪಟ್ಟಿಯಿಂದ ತಪ್ಪಾಗಿ ಹೊರಗುಳಿಸಿರುವ ಎಲ್ಲ ಅರ್ಹ ಮತದಾರರ ಹೆಸರುಗಳನ್ನು ಮರುಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು.

ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ಪ್ರಸ್ತುತ ವ್ಯವಸ್ಥೆಯನ್ನು ಬದಲಿಸಿ, ಪ್ರಧಾನಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿ ಅವರನ್ನು ಒಳಗೊಂಡ ಆಯ್ಕೆ ಪ್ರಕ್ರಿಯೆ ರೂಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಅರ್ಜಿಯ ನಮೂನೆ–7ರ ಮೂಲಕ ಆಕ್ಷೇಪಗಳನ್ನು ಸಲ್ಲಿಸಿರುವವರ ಹಿನ್ನೆಲೆ ಹಾಗೂ ಆಕ್ಷೇಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಮತದಾನದ ಹಕ್ಕಿಗೆ ಧಕ್ಕೆ ತಂದಿರುವುದು ದೃಢಪಟ್ಟಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಭೀಮರಾಯ ನಾಗನೂರ ಮಾತನಾಡಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿಯನ್ನು ತಡೆಯಲು ಹಾಗೂ ನಾಗರಿಕರ ಹಕ್ಕುಗಳ ರಕ್ಷಣೆಗೆ ಎಲ್ಲರೂ ಮುಂದಾಗಬೇಕು’ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಶ್ರೀಹರಿ ಕರಕಿಹಳ್ಳಿ, ಸಿದ್ದು ಕೇರೂರ, ವಿಷ್ಣುಸೇನಾ ಅಧ್ಯಕ್ಷ ಬಸವರಾಜ ಬಾಗೇವಾಡಿ, ಸಂಚಾಲಕ ಮೋದಿನ್ ಇನಾಮದಾರ, ಪರ್ಮಾನಂದ ಯಲಗೋಡ, ಹಬೀಬ್ ಜಮಾದಾರ, ಅಬ್ದುಲ್ ಗಣಿ, ಪ್ರಭಾಕರ ಸಾಗರ, ವಿಶ್ವರಾಧ್ಯ ಗೋಪಾಲಕರ್, ರಾಘವೇಂದ್ರ ಬುದ್ಧನಗರ್, ಇಬ್ರಾಹಿಂ ಪಟೇಲ್, ಮಹಮ್ಮದ್ ಚೌಧರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

janabhipraya

https://janabhipraya.com

Related Articles

Leave a Reply

Your email address will not be published. Required fields are marked *

Back to top button