ಕಲಬುರಗಿಜಿಲ್ಲೆ ಸುದ್ದಿ

ತಾರಾನಗರ, ಮಹಾಲಕ್ಷ್ಮಿ ಬಡಾವಣೆಯಲ್ಲಿ ಕಳ್ಳರ ಹಾವಳಿ: ರಾತ್ರಿ ಪೊಲೀಸ್ ಗಸ್ತು ಹೆಚ್ಚಿಸಲು ಮನವಿ

ಜೇವರ್ಗಿ: ಪಟ್ಟಣದ ತಾರಾನಗರ ಹಾಗೂ ಮಹಾಲಕ್ಷ್ಮಿ ಬಡಾವಣೆಗಳಲ್ಲಿ ಕಳೆದ ಎರಡು ತಿಂಗಳಿಂದ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ನಿವಾಸಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಳ್ಳತನ ಹಾಗೂ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಎರಡೂ ಬಡಾವಣೆಗಳ ನಿವಾಸಿಗಳು ಜೇವರ್ಗಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳಿಗೆ ಜಂಟಿ ಮನವಿ ಸಲ್ಲಿಸಿದರು.

ಕತ್ತಲಾದ ಬಳಿಕ ಮಾತ್ರವಲ್ಲದೆ ಹಗಲಿನ ವೇಳೆಯಲ್ಲಿಯೂ ಕಳ್ಳತನ ಹಾಗೂ ಕಳ್ಳತನದ ವಿಫಲ ಯತ್ನಗಳು ನಡೆಯುತ್ತಿವೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಸುಮಾರು 10ರಿಂದ 12 ಬಾರಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ಇದರಿಂದ ಸ್ಥಳೀಯ ನಿವಾಸಿಗಳು ಕಂಗಾಲಾಗಿದ್ದಾರೆ. ಕಳ್ಳರ ಹಾವಳಿಯಿಂದ ಸಾರ್ವಜನಿಕರು, ವ್ಯಾಪಾರಿಗಳು, ಉದ್ಯೋಗಿಗಳು ಹಾಗೂ ಮಹಿಳೆಯರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ನಿವಾಸಿಗಳು ದೂರಿದರು.

ಮನೆಗಳಿಗೆ ಬೀಗ ಹಾಕಿ ಹೊರಗೆ ತೆರಳಲು ಜನರು ಭಯಪಡುವಂತಾಗಿದೆ. ಬಡಾವಣೆಗಳಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ತಕ್ಷಣ ಸೂಕ್ತ ಹಾಗೂ ಬಿಗಿಯಾದ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದರು.

ಬಡಾವಣೆಗಳ ಸುರಕ್ಷತೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ತಕ್ಷಣ ‘ಡೈರಿ ಪಾಯಿಂಟ್’ ಸ್ಥಾಪಿಸಬೇಕು. ರಾತ್ರಿ ವೇಳೆ ಯಾವುದೇ ಲೋಪವಿಲ್ಲದೆ ನಿರಂತರ ಪೊಲೀಸ್ ಗಸ್ತು ಹೆಚ್ಚಿಸಬೇಕು. ಸಂಚಾರಿ ಬೀಟ್ ಪುಸ್ತಕ ನಿರ್ವಹಿಸಿ, ಮೇಲಧಿಕಾರಿಗಳು ಆಗಾಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸರಣಿ ಕಳ್ಳತನದ ಹಿಂದೆ ಇರುವ ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಬಂಧಿಸಬೇಕು. ಬಡಾವಣೆಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕಳ್ಳತನಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ನಿವಾಸಿಗಳು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರಮುಖ ವಕೀಲರಾದ ಮಲ್ಲಿಕಾರ್ಜುನ ಸೂಗೂರ್, ಅಣವೀರ ಗದ್ದಗಿ, ಶಿಕ್ಷಕರಾದ ಶಿವಲಿಂಗಪ್ಪ, ಸಿದ್ದು ಪೂಜಾರಿ, ವೀರೇಶ ಹಳ್ಳಿ, ಅನಿಲ್ ಯಾಳವಾರ್, ಸಿದ್ದು ಯಾಳವಾರ್, ಈರಣ್ಣ ನರಬೋಳಿ, ಸಕ್ರಪ್ಪ ಪೂಜಾರಿ, ವೀರೇಶ ಹಿರೇಮಠ, ನಾಗರಾಜ ವಿ.ಟಿ., ರಾಜು ಮುದ್ದಡಗಿ ಸೇರಿದಂತೆ ಬಡಾವಣೆಯ ಹಲವು ಪ್ರಮುಖ ನಾಗರಿಕರು ಉಪಸ್ಥಿತರಿದ್ದರು.

janabhipraya

https://janabhipraya.com

Related Articles

Leave a Reply

Your email address will not be published. Required fields are marked *

Back to top button