ಜಿಪಂ, ತಾಪಂ ಚುನಾವಣೆಗೆ ಮೀಸಲಾತಿ ಪ್ರಕಟ
1,129 ಜಿಪಂ, 3,656 ತಾಪಂ ಸ್ಥಾನಗಳಿಗೆ ವರ್ಗವಾರು ಮೀಸಲಾತಿ; ಜನವರಿ ಮೊದಲ ವಾರದಲ್ಲಿ ಚುನಾವಣೆ ಸಾಧ್ಯತೆ

ಬೆಂಗಳೂರು, ಅ.7: ರಾಜ್ಯದಲ್ಲಿ ಬಾಕಿ ಉಳಿದಿರುವ ಜಿಲ್ಲಾ ಪಂಚಾಯಿತಿ (ಜಿಪಂ) ಹಾಗೂ ತಾಲೂಕು ಪಂಚಾಯಿತಿ (ತಾಪಂ) ಚುನಾವಣೆಗಳ ಪ್ರಕ್ರಿಯೆ ಚುರುಕುಗೊಂಡಿದ್ದು, ಒಟ್ಟು 1,129 ಜಿಪಂ ಹಾಗೂ 3,656 ತಾಪಂ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗಿದೆ.
ಜಿಪಂನ 1,129 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ (ಎಸ್ಸಿ)ಗೆ 225, ಪರಿಶಿಷ್ಟ ಪಂಗಡ (ಎಸ್ಟಿ)ಗೆ 102, ಹಿಂದುಳಿದ ವರ್ಗ ‘ಎ’ಗೆ 183, ಹಿಂದುಳಿದ ವರ್ಗ ‘ಬಿ’ಗೆ 43 ಹಾಗೂ ಸಾಮಾನ್ಯ ವರ್ಗಕ್ಕೆ 576 ಸ್ಥಾನಗಳನ್ನು ಮೀಸಲಿಡಲಾಗಿದೆ.
ಇದೇ ವೇಳೆ ಮಹಿಳೆಯರಿಗೂ ಪ್ರತ್ಯೇಕ ಮೀಸಲಾತಿ ನಿಗದಿಪಡಿಸಲಾಗಿದೆ. ಎಸ್ಸಿ ಮಹಿಳೆಯರಿಗೆ 121, ಎಸ್ಟಿ ಮಹಿಳೆಯರಿಗೆ 59, ಹಿಂದುಳಿದ ವರ್ಗ ‘ಎ’ಗೆ 98, ಹಿಂದುಳಿದ ವರ್ಗ ‘ಬಿ’ಗೆ 25 ಹಾಗೂ ಸಾಮಾನ್ಯ ವರ್ಗದ ಮಹಿಳೆಯರಿಗೆ 268 ಸ್ಥಾನಗಳನ್ನು ಮೀಸಲಿಡಲಾಗಿದೆ.
ತಾಪಂನಲ್ಲೂ ವರ್ಗವಾರು ಮೀಸಲಾತಿ
ತಾಲೂಕು ಪಂಚಾಯಿತಿಯ ಒಟ್ಟು 3,656 ಸ್ಥಾನಗಳ ಪೈಕಿ ಎಸ್ಸಿಗೆ 733, ಎಸ್ಟಿಗೆ 394, ಹಿಂದುಳಿದ ವರ್ಗ ‘ಎ’ಗೆ 508, ಹಿಂದುಳಿದ ವರ್ಗ ‘ಬಿ’ಗೆ 111 ಹಾಗೂ ಸಾಮಾನ್ಯ ವರ್ಗಕ್ಕೆ 1,910 ಸ್ಥಾನಗಳನ್ನು ನಿಗದಿಪಡಿಸಲಾಗಿದೆ.
ಜನವರಿ ಮೊದಲ ವಾರದಲ್ಲಿ ಚುನಾವಣೆ?
ಜಿಪಂ ಹಾಗೂ ತಾಪಂ ಚುನಾವಣೆ ನಡೆಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಡಿಸೆಂಬರ್ನಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಿಸಿ, ಜನವರಿ ಮೊದಲ ವಾರದಲ್ಲಿ ಚುನಾವಣೆ ನಡೆಸುವ ಉದ್ದೇಶವಿದೆ ಎಂದು ವರದಿಯಾಗಿದೆ.
ಜಿಪಂ ಮತ್ತು ತಾಪಂ ಚುನಾವಣೆಗಳ ಬಳಿಕ ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಚುನಾವಣಾ ಚಟುವಟಿಕೆಗಳು ಮತ್ತಷ್ಟು ವೇಗ ಪಡೆಯುವ ನಿರೀಕ್ಷೆ ಇದೆ.
ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಯಾವ ಕ್ಷೇತ್ರ ಯಾವ ವರ್ಗಕ್ಕೆ ಮೀಸಲಾಗಿದೆ ಎಂಬ ಲೆಕ್ಕಾಚಾರ ಆರಂಭವಾಗಿದೆ. ಟಿಕೆಟ್ ಆಕಾಂಕ್ಷಿಗಳು, ಸ್ಥಳೀಯ ರಾಜಕೀಯ ಮುಖಂಡರು ಹಾಗೂ ವಿವಿಧ ಪಕ್ಷಗಳ ಕಾರ್ಯಕರ್ತರ ಚಟುವಟಿಕೆಗಳೂ ಚುರುಕುಗೊಳ್ಳುವ ಸಾಧ್ಯತೆ ಇದೆ.



