ನಾಗಾವಿ ಯಲ್ಲಮ್ಮ ಪಲ್ಲಕ್ಕಿ ಉತ್ಸವಕ್ಕೆ ಸಕಲ ಸಿದ್ಧತೆ: ಹಿರೇಮಠ
ಲಕ್ಷಾಂತರ ಭಕ್ತರ ಆಗಮನ ಹಿನ್ನೆಲೆ; ಸಂಚಾರ, ಪಾರ್ಕಿಂಗ್, ಕುಡಿಯುವ ನೀರು, ಸ್ವಚ್ಛತೆ ಸೇರಿ ಮೂಲಸೌಕರ್ಯಕ್ಕೆ ಒತ್ತು

ಚಿತ್ತಾಪುರ: ಪಟ್ಟಣದ ಐತಿಹಾಸಿಕ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ಯಶಸ್ವಿಗೊಳಿಸಲು ಅಧಿಕಾರಿಗಳೊಂದಿಗೆ ತಾಲೂಕಿನ ಎಲ್ಲ ಸಮಾಜಗಳ ಮುಖಂಡರು, ಭಕ್ತರು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಹಾಗೂ ತಹಸೀಲ್ದಾರ್ ನಾಗಯ್ಯ ಹಿರೇಮಠ ಮನವಿ ಮಾಡಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಶ್ರೀ ನಾಗಾವಿ ಯಲ್ಲಮ್ಮ ಪಲ್ಲಕ್ಕಿ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಹಾಗೂ ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತರು ಉತ್ಸವಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗುವುದು. ಸಂಚಾರ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆ ಉಂಟಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ದೇವಸ್ಥಾನ ರಸ್ತೆಯ ಎರಡೂ ಬದಿಯ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಕೈಗೊಳ್ಳುವುದು, ಕುಡಿಯುವ ನೀರು ಹಾಗೂ ಮೊಬೈಲ್ ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಅವರಿಗೆ ಸೂಚಿಸಿದರು. ಜಾತ್ರೆ ಸಂದರ್ಭದಲ್ಲಿ ದೀಪಾಲಂಕಾರಕ್ಕೆ ಜೆಸ್ಕಾಂ, ಹದಗೆಟ್ಟ ರಸ್ತೆ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದರು.
ಬೆಂಕಿ ಅವಘಡಗಳನ್ನು ತಡೆಯಲು ಅಗ್ನಿಶಾಮಕ ದಳ ಸನ್ನದ್ಧವಾಗಿರಬೇಕು. ಭಕ್ತರ ಅನುಕೂಲಕ್ಕಾಗಿ ವಿಶೇಷ ಸಾರಿಗೆ ಬಸ್ಗಳ ವ್ಯವಸ್ಥೆ ಮಾಡಬೇಕು. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ದುರಸ್ತಿಗೆ ಆಗ್ರಹ
ಟಿಪ್ಪರ್ಗಳ ಓಡಾಟದಿಂದ ನಾಗಾವಿ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಜಾತ್ರೆಗೆ ಆಗಮಿಸುವ ಭಕ್ತರಿಗೆ ತೊಂದರೆಯಾಗುತ್ತಿದೆ. ಕೂಡಲೇ ರಸ್ತೆ ದುರಸ್ತಿ ಮಾಡಬೇಕು ಎಂದು ಭೀಮಣ್ಣ ಕರದಳ್ಳಿ, ಮಲ್ಲಾರೆಡ್ಡಿ ಗೋಪಸೇನ್ ಹಾಗೂ ಈರಪ್ಪ ಭೋವಿ ಸಭೆಯಲ್ಲಿ ಆಗ್ರಹಿಸಿದರು.
ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಸಿಪಿಐ ಎಸ್.ಸಿ. ಪಾಟೀಲ ಹಾಗೂ ಪಿಎಸ್ಐ ಮಂಜುನಾಥ ರೆಡ್ಡಿ ಮಾತನಾಡಿ, ಜಾತ್ರೆ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಾಗಾವಿ ಯಲ್ಲಮ್ಮ ದೇವಿಯ ಉತ್ಸವವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ರತ್ನಾಕರ ನಾಯಕ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ನಾಗಾವಿ ಯಲ್ಲಮ್ಮ ಪಲ್ಲಕ್ಕಿ ಉತ್ಸವದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಚಂದ್ರಶೇಖರ್ ಅವಂಟಿ, ವಿಠ್ಠಲ್ ಕಟ್ಟಿಮನಿ, ನರಸಪ್ಪ ಭೋವಿ, ಶರಣಪ್ಪ ಕೋರವಾರ, ಅಂಬಾದಾಸ್ ತುರೆ, ಭಾಸ್ಕರ್ ಪುಣೆ, ಶರಣಪ್ಪ ನಾಟೀಕಾರ, ಸುರೇಶ್ ಬೆನಕನಳ್ಳಿ, ಭೀಮಣ್ಣ ಸಾಲಿ, ನಾಗರೆಡ್ಡಿ ಗೋಪಸೇನ್, ನಾಗರಾಜ ಭಂಕಲಗಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಸುರೇಶ್ ಅಳ್ಳೋಳ್ಳಿ, ಲಕ್ಷ್ಮೀಕಾಂತ್ ತಾಂಡೂರಕರ್, ಶಿವಾಜಿ ಕಾಶಿ, ರಾಮಲಿಂಗ ಬಾನರ್, ಶಿವಕಾಂತ್ ಬೆಣ್ಣೂರಕರ್, ವಿ.ಎ. ಸಂಗಮೇಶ, ರಾಜಕುಮಾರ್ ಮರತೂರಕರ್ ಸೇರಿದಂತೆ ಹಲವರು ಇದ್ದರು.



