ಯಾದಗಿರಿ

ಕೆಂಭಾವಿಯಲ್ಲಿ ‘ಸ್ವಚ್ಛ ಸಂಕಲ್ಪ ಮಾಸ’ ಅಭಿಯಾನಕ್ಕೆ ಚಾಲನೆ

ಸ್ವಚ್ಛತೆ ನಿರಂತರ ಹೊಣೆಗಾರಿಕೆ; ನಾಗರಿಕರ ಸಹಭಾಗಿತ್ವಕ್ಕೆ ಪುರಸಭೆ ಕರೆ

ಕೆಂಭಾವಿ: ಪಟ್ಟಣವನ್ನು ಸ್ವಚ್ಛ, ಸುಂದರ ಹಾಗೂ ಆರೋಗ್ಯಕರವಾಗಿಸುವ ಉದ್ದೇಶದಿಂದ ಕೆಂಭಾವಿ ಪುರಸಭೆ ವತಿಯಿಂದ ಹಮ್ಮಿಕೊಂಡಿರುವ ‘ಸ್ವಚ್ಛ ಸಂಕಲ್ಪ ಮಾಸ’ ಅಭಿಯಾನಕ್ಕೆ ವಾರ್ಡ್‌ ಸಂಖ್ಯೆ 9 ಮತ್ತು 10ರಲ್ಲಿ ಚಾಲನೆ ನೀಡಲಾಯಿತು.

ನಗರಾಭಿವೃದ್ಧಿ ಇಲಾಖೆ ಹಾಗೂ ಸ್ವಚ್ಛ ಭಾರತ ಮಿಷನ್‌ (ನಗರ) ಅಡಿಯಲ್ಲಿ ಅಕ್ಟೋಬರ್‌ 2ರಿಂದ ನವೆಂಬರ್‌ 1ರವರೆಗೆ ‘ಸ್ವಚ್ಛ ನಗರ–ಆರೋಗ್ಯಕರ ಸಮಾಜ’ ಎಂಬ ಆಶಯದೊಂದಿಗೆ ಈ ಅಭಿಯಾನ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಪುರಸಭೆಯ ಸದಸ್ಯರು ಹಾಗೂ ಸಿಬ್ಬಂದಿ ಸಾಮೂಹಿಕವಾಗಿ ಸ್ವಚ್ಛತಾ ಪ್ರತಿಜ್ಞೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ಸ್ವಚ್ಛತೆ ಕೇವಲ ಒಂದು ದಿನಕ್ಕೆ ಸೀಮಿತವಾದ ಕಾರ್ಯಕ್ರಮವಲ್ಲ. ಅದು ಪ್ರತಿಯೊಬ್ಬ ನಾಗರಿಕನ ನಿರಂತರ ಹೊಣೆಗಾರಿಕೆಯಾಗಿದೆ. ಮನೆ, ಬೀದಿ ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಪಟ್ಟಣದ ನೈರ್ಮಲ್ಯ ಕಾಪಾಡಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ನಾಲ್ಕು ವಾರಗಳ ಕಾಲ ವಿವಿಧ ಚಟುವಟಿಕೆ

ಅಭಿಯಾನದ ಅಂಗವಾಗಿ ಅಕ್ಟೋಬರ್‌ 2ರಿಂದ 10ರವರೆಗೆ ‘ಸ್ವಚ್ಛತಾ ಪರಿವಾರ ಸಪ್ತಾಹ’ ಆಚರಿಸಲಾಗುತ್ತಿದ್ದು, ಮನೆಮನೆ ಸ್ವಚ್ಛತೆ, ತ್ಯಾಜ್ಯ ವಿಂಗಡಣೆ, ಬೃಹತ್‌ ತ್ಯಾಜ್ಯ ಉತ್ಪಾದಕರ ನೋಂದಣಿ ಹಾಗೂ ಪೌರಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ.

ಅಕ್ಟೋಬರ್‌ 11ರಿಂದ 17ರವರೆಗೆ ‘ಸ್ವಚ್ಛತಾ ಪರಿಹಾರ ಸಪ್ತಾಹ’ದಡಿ ವಾರ್ಡ್‌ ಮಟ್ಟದ ಸ್ವಚ್ಛತಾ ಕಾರ್ಯ, ಸಾರ್ವಜನಿಕ ಸ್ಥಳಗಳ ಸೌಂದರ್ಯೀಕರಣ ಹಾಗೂ ಕಸ ಸುರಿಯುವ ಸ್ಥಳಗಳ ನಿರ್ಮೂಲನೆಗೆ ಕ್ರಮ ಕೈಗೊಳ್ಳಲಾಗುತ್ತದೆ.

ಅಕ್ಟೋಬರ್‌ 18ರಿಂದ 24ರವರೆಗೆ ‘ಸ್ವಚ್ಛ ಪರಿವರ್ತನಾ ಸಪ್ತಾಹ’ದಡಿ ರಸ್ತೆ, ಚರಂಡಿ, ವಿಭಜಕ ಹಾಗೂ ಉದ್ಯಾನಗಳ ಸ್ವಚ್ಛತೆ, ಬೀದಿ ನಾಯಿಗಳಿಗೆ ರೇಬೀಸ್‌ ಲಸಿಕೆ ನೀಡುವುದು ಮತ್ತು ಬೀದಿಬದಿ ವ್ಯಾಪಾರಿಗಳು ಹಾಗೂ ಯುವಜನರ ಸಹಭಾಗಿತ್ವಕ್ಕೆ ಒತ್ತು ನೀಡಲಾಗುತ್ತದೆ.

ಅಕ್ಟೋಬರ್‌ 25ರಿಂದ 31ರವರೆಗೆ ‘ನೈರ್ಮಲ್ಯ ಸಪ್ತಾಹ’ ಆಚರಿಸಿ, ನೀರು ಮತ್ತು ನೈರ್ಮಲ್ಯ ವ್ಯವಸ್ಥೆ, ಸುರಕ್ಷಿತ ಶೌಚಾಲಯಗಳ ನಿರ್ವಹಣೆ, ಪೌರಕಾರ್ಮಿಕರ ಹಕ್ಕು ಹಾಗೂ ಸುರಕ್ಷತೆ ಮತ್ತು ಮ್ಯಾನ್ಯುವಲ್‌ ಸ್ಕ್ಯಾವೆಂಜಿಂಗ್‌ ನಿರ್ಮೂಲನೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಕಸಮುಕ್ತ ಪಟ್ಟಣ ನಿರ್ಮಾಣ ಗುರಿ

ಹಸಿ ಮತ್ತು ಒಣ ಕಸವನ್ನು ಮೂಲದಲ್ಲಿಯೇ ವಿಂಗಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು, ತ್ಯಾಜ್ಯ ಕಡಿಮೆ ಮಾಡುವುದು, ಮರುಬಳಕೆ ಹಾಗೂ ಮರುಸಂಸ್ಕರಣೆಯ (3R) ಸೂತ್ರವನ್ನು ಜನಜೀವನದಲ್ಲಿ ಅಳವಡಿಸುವುದು ಅಭಿಯಾನದ ಪ್ರಮುಖ ಉದ್ದೇಶಗಳಾಗಿವೆ. ಮಹಿಳೆಯರು, ಯುವಕರು, ಸ್ವಸಹಾಯ ಸಂಘಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಕೆಂಭಾವಿಯನ್ನು ಕಸಮುಕ್ತ ಮತ್ತು ಸುಂದರ ಪಟ್ಟಣವನ್ನಾಗಿ ರೂಪಿಸುವ ಗುರಿಯನ್ನು ಪುರಸಭೆ ಹೊಂದಿದೆ.

ಪುರಸಭೆ ಸದಸ್ಯರಾದ ಆರಿಫ್‌ ಹುಸೇನ್‌ ಖಾಜಿ, ಮಲ್ಲಿನಾಥ ಗೌಡ ಪೊಲೀಸ್‌ ಪಾಟೀಲ, ಅಧಿಕಾರಿಗಳು, ಪೌರಕಾರ್ಮಿಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

janabhipraya

https://janabhipraya.com

Related Articles

Leave a Reply

Your email address will not be published. Required fields are marked *

Back to top button