ಕೆಂಭಾವಿ ಬಸ್ ನಿಲ್ದಾಣದಲ್ಲಿ ಆಸನಗಳ ಕೊರತೆ:ಪ್ರಯಾಣಿಕರ ಪರದಾಟ
ವೃದ್ಧರು, ಮಹಿಳೆಯರು, ಗರ್ಭಿಣಿಯರು ಸಂಕಷ್ಟದಲ್ಲಿ; ಮೂಲಸೌಕರ್ಯ ಕಲ್ಪಿಸುವಂತೆ ಸಾರ್ವಜನಿಕರ ಆಗ್ರಹ

ವರದಿ: ಡಾ. ಪರಶುರಾಮ ಸಿ.ಎಂ.
ಕೆಂಭಾವಿ, ಆ.6: ಯಾದಗಿರಿ ಜಿಲ್ಲೆಯ ಪ್ರಮುಖ ವ್ಯಾಪಾರ, ಶಿಕ್ಷಣ ಹಾಗೂ ಸಾರಿಗೆ ಕೇಂದ್ರವಾಗಿರುವ ಕೆಂಭಾವಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಆಸನಗಳ ಕೊರತೆಯಿಂದ ಸಾರ್ವಜನಿಕರು ಹಾಗೂ ಪ್ರಯಾಣಿಕರು ಪ್ರತಿದಿನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆ ಜಾರಿಯಾದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದರೂ, ಅದಕ್ಕೆ ಅನುಗುಣವಾಗಿ ಬಸ್ ನಿಲ್ದಾಣದ ಮೂಲಸೌಕರ್ಯ ಅಭಿವೃದ್ಧಿಯಾಗದಿರುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಕೆಂಭಾವಿ ಪಟ್ಟಣವು ಹೋಬಳಿ ಕೇಂದ್ರವಾಗಿದ್ದು, ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ವ್ಯಾಪಾರ, ಶಿಕ್ಷಣ ಹಾಗೂ ವಿವಿಧ ಅಗತ್ಯಗಳಿಗಾಗಿ ಇಲ್ಲಿನ ಬಸ್ ನಿಲ್ದಾಣವನ್ನೇ ಅವಲಂಬಿಸಿದ್ದಾರೆ. ನಿತ್ಯ ಸುಮಾರು 200ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತಿದ್ದು, ಬೆಂಗಳೂರು, ಹುಬ್ಬಳ್ಳಿ–ಧಾರವಾಡ, ಕಲಬುರಗಿ, ವಿಜಯಪುರ, ರಾಯಚೂರು, ಬಾಗಲಕೋಟೆ, ಬಳ್ಳಾರಿ, ಬಸವಕಲ್ಯಾಣ ಸೇರಿದಂತೆ ಮುಂಬೈ, ಪುಣೆ, ಸೋಲಾಪುರ ಹಾಗೂ ಹೈದರಾಬಾದ್‌ಗೆ ನೇರ ಬಸ್ ಸೇವೆ ಲಭ್ಯವಿದೆ.
ಸಾವಿರಾರು ಪ್ರಯಾಣಿಕರು ಪ್ರತಿದಿನ ಬಸ್‌ಗಾಗಿ ಕಾಯುತ್ತಿದ್ದರೂ, ಕುಳಿತುಕೊಳ್ಳಲು ಸಾಕಷ್ಟು ಆಸನಗಳಿಲ್ಲ. ಇದರ ಪರಿಣಾಮ ವೃದ್ಧರು, ಗರ್ಭಿಣಿಯರು, ಅನಾರೋಗ್ಯದಿಂದ ಬಳಲುತ್ತಿರುವವರು ಹಾಗೂ ಸಣ್ಣ ಮಕ್ಕಳೊಂದಿಗೆ ಬರುವ ಮಹಿಳೆಯರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ಆಸನ ಸಿಗದೆ ನಿಲ್ದಾಣದ ನೆಲದ ಮೇಲೆಯೇ ಕುಳಿತು ಬಸ್‌ಗಾಗಿ ಕಾಯುವ ಪರಿಸ್ಥಿತಿ ಸಾಮಾನ್ಯವಾಗಿದೆ.
ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದು ಸ್ವಾಗತಾರ್ಹವಾದರೂ, ಅದಕ್ಕೆ ತಕ್ಕಂತೆ ಬಸ್ ನಿಲ್ದಾಣಗಳಲ್ಲಿ ಆಸನ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿಲ್ಲ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಸಿಲು ಹಾಗೂ ಮಳೆಯ ಸಮಯದಲ್ಲಿ ಪ್ರಯಾಣಿಕರ ಸಂಕಷ್ಟ ಮತ್ತಷ್ಟು ಹೆಚ್ಚುತ್ತಿದೆ.
ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
ಆಸನಗಳ ಕೊರತೆ, ಶುದ್ಧ ಕುಡಿಯುವ ನೀರಿನ ಅಭಾವ, ಶೌಚಾಲಯದ ದುರವಸ್ಥೆ ಹಾಗೂ ನಿಲ್ದಾಣದಲ್ಲಿ ಸ್ವಚ್ಛತೆ ಕೊರತೆ ಕುರಿತು ಸ್ಥಳೀಯರು ಹಾಗೂ ಪ್ರಯಾಣಿಕರು ಹಲವು ಬಾರಿ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಇದುವರೆಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.
ತ್ವರಿತ ಕ್ರಮಕ್ಕೆ ಒತ್ತಾಯ
ಬೆಳೆಯುತ್ತಿರುವ ಕೆಂಭಾವಿ ಪಟ್ಟಣದ ಅಗತ್ಯಕ್ಕೆ ತಕ್ಕಂತೆ ಬಸ್ ನಿಲ್ದಾಣದಲ್ಲಿ ಹೆಚ್ಚುವರಿ ಆಸನಗಳು ಮತ್ತು ಬೆಂಚ್‌ಗಳನ್ನು ಅಳವಡಿಸುವುದು, ಶುದ್ಧ ಕುಡಿಯುವ ನೀರು ಹಾಗೂ ಸುಸಜ್ಜಿತ ಶೌಚಾಲಯ ವ್ಯವಸ್ಥೆ ಕಲ್ಪಿಸುವುದು, ಪ್ರತಿದಿನ ನಿಯಮಿತ ಸ್ವಚ್ಛತೆ ನಡೆಸುವುದು ಹಾಗೂ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ನಿಲ್ದಾಣವನ್ನು ವಿಸ್ತರಿಸಿ ಮೂಲಸೌಕರ್ಯ ಹೆಚ್ಚಿಸುವಂತೆ ಸಾರ್ವಜನಿಕರು ಹಾಗೂ ಪ್ರಯಾಣಿಕರು ಸಾರಿಗೆ ಸಂಸ್ಥೆ ಮತ್ತು ಜನಪ್ರತಿನಿಧಿಗಳನ್ನು ಆಗ್ರಹಿಸಿದ್ದಾರೆ.



