ಕಲಬುರಗಿಜಿಲ್ಲೆ ಸುದ್ದಿ

ಖರ್ಗೆ ಅವಮಾನ ಆರೋಪ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಕಲಬುರಗಿ: ರಾಷ್ಟ್ರೀಯ ನಾಯಕರನ್ನು ಜಾತಿವಾದಿ ಹಾಗೂ ಸಂವಿಧಾನ ವಿರೋಧಿ ಮನೋಭಾವದಿಂದ ಅವಮಾನಿಸುವ ಕೃತ್ಯಗಳನ್ನು ತೀವ್ರವಾಗಿ ಖಂಡಿಸಿರುವ ಅಹಿಂದ ಜನಸಂಘದ ರಾಜ್ಯ ಕಾರ್ಯದರ್ಶಿ ಜಯಶ್ರೀ ಎಂ. ಕಟ್ಟಿಮನಿ, ಇಂತಹ ಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನವನ್ನು ದೇಶ ಅಂಗೀಕರಿಸುವ ಮೂಲಕ ಚತುರ್ವರ್ಣ ಪದ್ಧತಿ, ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆಯಂತಹ ಅನಿಷ್ಠ ಆಚರಣೆಗಳನ್ನು ಕಾನೂನುಬದ್ಧವಾಗಿ ತಿರಸ್ಕರಿಸಿದೆ ಎಂದು ತಿಳಿಸಿದ್ದಾರೆ.

ಆದರೂ ಸಮಾಜದಲ್ಲಿ ಜಾತಿವಾದಿ ಹಾಗೂ ಪಾಳೇಗಾರಿಕೆಯ ಮನೋಭಾವ ಇನ್ನೂ ಜೀವಂತವಾಗಿರುವುದು ವಿಷಾದನೀಯ ಸಂಗತಿ ಎಂದು ಅವರು ಹೇಳಿದ್ದಾರೆ.ಇತ್ತೀಚೆಗೆ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡಲಾಗಿದೆ ಎನ್ನಲಾದ ಘಟನೆ ಜಾತಿವಾದಿ ಮನೋಭಾವ ಇನ್ನೂ ಮುಂದುವರಿದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಜಯಶ್ರೀ ಕಟ್ಟಿಮನಿ ಆರೋಪಿಸಿದ್ದಾರೆ.

ಈ ಹಿಂದೆ ಬಾಬು ಜಗಜೀವನ್ ರಾಮ್ ಅವರು ಸಂಪೂರ್ಣಾನಂದ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ಸಂದರ್ಭದಲ್ಲಿ ನಡೆದ ಅವಮಾನಕಾರಿ ಘಟನೆಗಳನ್ನು ಅವರು ಪ್ರಸ್ತಾಪಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಸತ್ ಭವನ ಉದ್ಘಾಟನೆ ಹಾಗೂ ರಾಮಮಂದಿರ ಪ್ರತಿಷ್ಠಾಪನಾ ಕಾರ್ಯಕ್ರಮಗಳಿಗೆ ಆಹ್ವಾನಿಸದಿರುವ ವಿಚಾರವನ್ನೂ ಉಲ್ಲೇಖಿಸಿ, ಇಂತಹ ಘಟನೆಗಳು ಜಾತಿವಾದಿ ಮನೋಭಾವವನ್ನು ಪ್ರತಿಬಿಂಬಿಸುತ್ತವೆ ಎಂದು ಟೀಕಿಸಿದ್ದಾರೆ.

ರಾಷ್ಟ್ರೀಯ ನಾಯಕರಿಗೆ ಅವಮಾನ ಮಾಡುವುದು ಕೇವಲ ವ್ಯಕ್ತಿಯೊಬ್ಬರಿಗೆ ಮಾಡಿದ ಅವಮಾನವಲ್ಲ. ಅದು ದೇಶದ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ಮೌಲ್ಯಗಳಿಗೆ ಮಾಡಿದ ಅವಮಾನವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇಂತಹ ಘಟನೆಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ತಕ್ಷಣ ಸೂಕ್ತ ಕ್ರಮ ಕೈಗೊಂಡು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಜಯಶ್ರೀ ಎಂ. ಕಟ್ಟಿಮನಿ ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button