ಕಲಬುರಗಿಜಿಲ್ಲೆ ಸುದ್ದಿ

ಕನ್ನಡ ಸಾಹಿತ್ಯ ಸಮಾಜದ ಕಣ್ಣು, ಬದುಕಿನ ದಾರಿ: ಡಾ. ಚೆನ್ನವೀರ ಶಿವಾಚಾರ್ಯ

ಕಲಬುರಗಿಯಲ್ಲಿ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ; ಕನ್ನಡಿಗರಿಗೆ ಕೈಗಾರಿಕೆಗಳಲ್ಲಿ ಆದ್ಯತೆ ನೀಡಲು ನಾಗೇಂದ್ರ ಮಸೂತಿ ಆಗ್ರಹ

ಕಲಬುರಗಿ: ಸಾಹಿತ್ಯವು ಸಮಾಜದ ಕಣ್ಣು, ಮನಸ್ಸಿನ ಭಾವನೆಗಳಿಗೆ ಧ್ವನಿಯಾಗಿ ಬದುಕಿನ ಹಾದಿಗೆ ಬೆಳಕಾಗುತ್ತದೆ. ನಾಡು–ನುಡಿಯನ್ನು ಕಟ್ಟುವ ಪ್ರಬುದ್ಧ ಮನಸ್ಸುಗಳಿಂದ ಕನ್ನಡ ನಾಡನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ ಎಂದು ಹರಕೂಡ ಸಂಸ್ಥಾನದ ಡಾ. ಚೆನ್ನವೀರ ಶಿವಾಚಾರ್ಯರು ಹೇಳಿದರು.

ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಎರಡು ದಿನಗಳ ಕಾಲ ನಡೆದ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡಿಗರು ಪ್ರತಿದಿನ ಬೆಳಿಗ್ಗೆ ಕನ್ನಡಮ್ಮನನ್ನು ಸ್ಮರಿಸಿ, ನಾಡು–ನುಡಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಕಳೆದ ಐದು ವರ್ಷಗಳಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಪರ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಕಲಬುರಗಿಯನ್ನು ಸಾಂಸ್ಕೃತಿಕ ಜಿಲ್ಲೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಿ

ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಡಾ. ನಾಗೇಂದ್ರ ಮಸೂತಿ ಮಾತನಾಡಿ, ಭಾಷೆ ಮತ್ತು ಸಂಸ್ಕೃತಿ ನಮ್ಮ ಜೀವನದ ಅಸ್ಮಿತೆಯಾಗಿವೆ. ಮಾತೃಭಾಷೆಯ ಶಿಕ್ಷಣದ ಮೂಲಕ ಉನ್ನತ ಶಿಕ್ಷಣದ ಮೌಲ್ಯ ಹೆಚ್ಚಿಸಬೇಕು. ಜಿಲ್ಲೆಯ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೈಗಾರಿಕೀಕರಣಕ್ಕೆ ಆದ್ಯತೆ ನೀಡಬೇಕು. ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವುದರ ಜತೆಗೆ ಈ ಭಾಗದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು. ಕನ್ನಡಕ್ಕೆ ಮೊದಲ ಲಾಕ್ಷಣಿಕ ಗ್ರಂಥ ನೀಡಿದ ಈ ನೆಲದ ಹಿರಿಮೆಯನ್ನು ಎತ್ತಿಹಿಡಿಯಬೇಕು. ಜನಪದ ಸಂಸ್ಕೃತಿ ಮತ್ತು ಸಂಪತ್ತಿನ ನಾಡನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.

ಐದು ವರ್ಷಗಳಲ್ಲಿ ಹಲವು ಸಮ್ಮೇಳನಗಳ ಆಯೋಜನೆ

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಮಾಜದಲ್ಲಿರುವ ಮೂಢನಂಬಿಕೆ, ಮೌಢ್ಯ ಹಾಗೂ ಸಾಮಾಜಿಕ ಅಸಮಾನತೆಯ ಕತ್ತಲೆಯನ್ನು ದೂರಮಾಡಲು ಸಾಹಿತ್ಯದ ಬೆಳಕು ಅಗತ್ಯವಾಗಿದೆ. ಸಾಹಿತ್ಯ ಜ್ಞಾನವು ಸಮಾಜದಲ್ಲಿ ಹೊಸ ಚೈತನ್ಯ ಮೂಡಿಸುವ ಶಕ್ತಿಯನ್ನು ಹೊಂದಿದೆ ಎಂದರು.

ತಮ್ಮ ಐದು ವರ್ಷಗಳ ಅವಧಿಯಲ್ಲಿ 16 ವಿಶೇಷ ಸಮ್ಮೇಳನಗಳು ಹಾಗೂ ಆರು ಜಿಲ್ಲಾ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ರಾಜ್ಯದಲ್ಲೇ ದಾಖಲೆ ನಿರ್ಮಿಸುವ ಪ್ರಯತ್ನ ಮಾಡಲಾಗಿದೆ. ಮುಂದೆಯೂ ಕನ್ನಡದ ರಥವನ್ನು ಎಳೆಯುವ ಉತ್ಸಾಹವಿದ್ದು, ಜಿಲ್ಲೆಯ ಜನರ ಸಹಕಾರದಿಂದ ಈ ಕಾರ್ಯಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ತಿಳಿಸಿದರು.

ಶರಣಬಸವೇಶ್ವರ ಸಂಸ್ಥಾನದ ಶ್ರೀ ದೊಡ್ಡಪ್ಪ ಎಸ್. ಅಪ್ಪ ಸಮ್ಮೇಳನವನ್ನು ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷರಾಗಿ ಮುಡುಬಿ ಗುಂಡೇರಾವ್ ಉಪಸ್ಥಿತರಿದ್ದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ, ನಿವೃತ್ತ ಮುಖ್ಯ ಎಂಜಿನಿಯರ್ ಡಾ. ಸುರೇಶ ಶರ್ಮಾ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಕೃತಿಗಳ ಲೋಕಾರ್ಪಣೆ, ಸಾಹಿತಿಗಳಿಗೆ ಗೌರವ

ಸಮ್ಮೇಳನದ ಅಂಗವಾಗಿ ಡಾ. ಶಿವಶರಣಪ್ಪ ಮೊತಕಪಳ್ಳಿ ಮತ್ತು ವಿಜಯಕುಮಾರ ತೇಗಲತಿಪ್ಪಿ ಸಂಪಾದಕತ್ವದ ‘ಸಾಹಿತ್ಯ ಬೆಳಕು’ ಕೃತಿಯನ್ನು ಹಾಗೂ ಡಾ. ನಾಗೇಂದ್ರ ಮಸೂತಿ ಅವರ ಕಿರುಭಾವಿನಿ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.

ಸಾಂಸ್ಕೃತಿಕ ಮೆರವಣಿಗೆಗೆ ಹೋರಾಟಗಾರ ಮಲ್ಲಿಕಾರ್ಜುನ ಸಾರವಾಡ ಚಾಲನೆ ನೀಡಿದರು. ಸಾಹಿತ್ಯ ಕ್ಷೇತ್ರದ ಸಾಧಕರಾದ ಡಾ. ಹನುಮಂತರಾವ್ ದೊಡ್ಡಮನಿ, ಸಿದ್ದರಾಮ ಪೊಲೀಸ್ ಪಾಟೀಲ, ರಾಘವ ಖಾದ್ರಿ, ಡಾ. ಎಸ್.ಎಸ್. ಪಾಟೀಲ, ಡಾ. ಶಶಿಶೇಖರ ರೆಡ್ಡಿ, ಶಿವಶರಣಪ್ಪ ಸಿರಿ, ಉಮೇಶ ಬಾಬು ಸಾಸಾಬಾಳ ಸೇರಿದಂತೆ ಹಲವು ಗಣ್ಯರಿಗೆ ‘ಸಾಹಿತ್ಯ ಸಂಗಾತಿ’ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ವಿಚಾರಗೋಷ್ಠಿಗಳಲ್ಲಿ ಸಾಹಿತ್ಯದ ವಿವಿಧ ಆಯಾಮಗಳ ಚರ್ಚೆ

ಹಿರಿಯ ಸಾಹಿತಿ ಡಾ. ಕಲ್ಯಾಣರಾವ್ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಕನ್ನಡ ಕಾವ್ಯ ಪರಂಪರೆ ಮತ್ತು ಮೌಲ್ಯಗಳ ಕುರಿತು ಡಾ. ಶ್ರೀಶೈಲ ನಾಗರಾಳ, ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಕಥೆ–ಕಾದಂಬರಿಗಳ ಪಾತ್ರದ ಕುರಿತು ಡಾ. ಕೆ.ಎಸ್. ನಾಯಕ ಹಾಗೂ ಮಹಿಳಾ ಅಭಿವೃದ್ಧಿಯ ಮುನ್ನೋಟದ ಕುರಿತು ಡಾ. ಜಯದೇವಿ ಗಾಯಕ್ವಾಡ್ ಮಾತನಾಡಿದರು.

ಸಾಹಿತಿ ಡಾ. ಚಿ.ಸಿ. ನಿಂಗಣ್ಣ ಅಧ್ಯಕ್ಷತೆಯಲ್ಲಿ ನಡೆದ ‘ನೋಡು ಕನ್ನಡ, ಹಾಡು ಕನ್ನಡ’ ಕವಿಗೋಷ್ಠಿಯಲ್ಲಿ ಜಿಲ್ಲೆಯ ಹಲವು ಕವಿಗಳು ಸಮಕಾಲೀನ ವಿದ್ಯಮಾನಗಳ ಕುರಿತು ಕವನಗಳನ್ನು ವಾಚಿಸಿ ಗಮನ ಸೆಳೆದರು. ಪತ್ರಕರ್ತ ರಾಜಕುಮಾರ ಬಿ. ಉದನೂರು ಆಶಯ ನುಡಿಗಳನ್ನಾಡಿದರು. ಡಾ. ರಾಜೇಂದ್ರ ಕೊಂಡಾ ಮಾತನಾಡಿದರು.

ಕನ್ನಡದ ಅಭಿಮಾನ ಸಾರಿದ ಭವ್ಯ ಮೆರವಣಿಗೆ

ಸಮ್ಮೇಳನಾಧ್ಯಕ್ಷ ಡಾ. ನಾಗೇಂದ್ರ ಮಸೂತಿ ಅವರ ನೇತೃತ್ವದಲ್ಲಿ ನಡೆದ ಸಾಂಸ್ಕೃತಿಕ ಮೆರವಣಿಗೆ ಗಮನ ಸೆಳೆಯಿತು. ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಆರಂಭವಾದ ಮೆರವಣಿಗೆ ವಿಶ್ವೇಶ್ವರಯ್ಯ ಭವನದವರೆಗೆ ಸಾಗಿತು.

ಜಯ ಕರ್ನಾಟಕ ಸಂಘಟನೆಯ ವಿಭಾಗೀಯ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ ಚಾಲನೆ ನೀಡಿದರು. ವಿವಿಧ ಕಲಾತಂಡಗಳು, ಡೊಳ್ಳು ಕುಣಿತ, ಲೇಜಿಮ್ ವಾದ್ಯ ಹಾಗೂ ನೃತ್ಯ ಪ್ರದರ್ಶನಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಕನ್ನಡದ ಘೋಷಣೆಗಳನ್ನು ಮೊಳಗಿಸುತ್ತ ಸಾಗಿದ ಕನ್ನಡಾಭಿಮಾನಿಗಳು ನಾಡು–ನುಡಿಯ ಪ್ರೀತಿಯನ್ನು ಅಭಿವ್ಯಕ್ತಪಡಿಸಿದರು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಡೊಳ್ಳಿನ ನಾದಕ್ಕೆ ಹೆಜ್ಜೆ ಹಾಕಿ ಗಮನ ಸೆಳೆದರು.

ಮುಂದಿನ ಚುನಾವಣೆಯಲ್ಲೂ ಸ್ಪರ್ಧೆ: ವಿಜಯಕುಮಾರ ಪಾಟೀಲ

ಜಿಲ್ಲೆಯ ಕವಿ–ಲೇಖಕರು, ಸಹೃದಯರು ಹಾಗೂ ಗುರುಗಳ ಪ್ರೋತ್ಸಾಹದಿಂದ ಮುಂದಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲೂ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಸಮಾಜಮುಖಿ ಕಾರ್ಯಕ್ರಮಗಳೇ ನನ್ನ ಮುಂದಿನ ಕಾರ್ಯಕ್ಕೆ ಶ್ರೀರಕ್ಷೆಯಾಗಲಿವೆ ಎಂದು ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.

ಸಮ್ಮೇಳನದಲ್ಲಿ ಸಾಹಿತಿಗಳು, ಕವಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button