ರಾಖಿ ಹಬ್ಬದ ಸಂಭ್ರಮ: ಸೂಪರ್ ಮಾರ್ಕೆಟ್ನಲ್ಲಿ ರಾಖಿ ಖರೀದಿಗೆ ಮಹಿಳೆಯರ ಉತ್ಸಾಹ

ಕಲಬುರಗಿ: ಸಹೋದರ–ಸಹೋದರಿಯರ ಬಾಂಧವ್ಯವನ್ನು ಸಾರುವ ರಕ್ಷಾಬಂಧನ (ರಾಖಿ ಹಬ್ಬ)ದ ಹಿನ್ನೆಲೆಯಲ್ಲಿ ನಗರದ ಸೂಪರ್ ಮಾರ್ಕೆಟ್ ಮಾರುಕಟ್ಟೆಯಲ್ಲಿ ಗುರುವಾರ ರಾಖಿ ಖರೀದಿಯ ಸಂಭ್ರಮ ಕಂಡುಬಂತು.
ಶುಕ್ರವಾರ ನಡೆಯಲಿರುವ ರಕ್ಷಾಬಂಧನದ ಅಂಗವಾಗಿ ನಗರದ ವಿವಿಧೆಡೆಯಿಂದ ಯುವತಿಯರು ಹಾಗೂ ಮಹಿಳೆಯರು ಮಾರುಕಟ್ಟೆಗೆ ಆಗಮಿಸಿ ಬಣ್ಣಬಣ್ಣದ ಹಾಗೂ ವಿವಿಧ ವಿನ್ಯಾಸಗಳ ರಾಖಿಗಳನ್ನು ಖರೀದಿಸಿದರು. ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನರು ಸಿದ್ಧತೆ ನಡೆಸುತ್ತಿರುವುದು ಕಂಡುಬಂತು.
ಮಾರುಕಟ್ಟೆಯಲ್ಲಿ ವಿವಿಧ ಬಣ್ಣ, ವಿನ್ಯಾಸ ಹಾಗೂ ಆಕರ್ಷಕ ಅಲಂಕಾರಗಳಿಂದ ಕೂಡಿದ ರಾಖಿಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ತಮ್ಮ ಸಹೋದರರಿಗೆ ಇಷ್ಟವಾಗುವ ರಾಖಿಗಳನ್ನು ಆಯ್ಕೆ ಮಾಡಿಕೊಳ್ಳಲು ಯುವತಿಯರು ಹಾಗೂ ಮಹಿಳೆಯರು ಉತ್ಸಾಹದಿಂದ ಖರೀದಿಯಲ್ಲಿ ತೊಡಗಿದ್ದರು.
ಸಹೋದರನ ಕೈಗೆ ರಾಖಿ ಕಟ್ಟಿ, ಪರಸ್ಪರ ಪ್ರೀತಿ–ವಾತ್ಸಲ್ಯವನ್ನು ಹಂಚಿಕೊಳ್ಳುವ ರಕ್ಷಾಬಂಧನ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ರಾಖಿಗಳ ಜೊತೆಗೆ ಸಿಹಿತಿಂಡಿ ಹಾಗೂ ಉಡುಗೊರೆಗಳ ಖರೀದಿಗೂ ಜನರು ಮುಂದಾಗುತ್ತಿರುವುದು ಕಂಡುಬಂತು.



