ಕಲಬುರಗಿಜಿಲ್ಲೆ ಸುದ್ದಿ

ಶಾಖಾಪುರದಲ್ಲಿ ಅ.31ರಂದು ಲಿಂ. ಸಿದ್ಧರಾಮ ಶಿವಯೋಗಿಗಳ 76ನೇ ಪುಣ್ಯಾರಾಧನೆ

ಜೋಳದ ರೊಟ್ಟಿ ಜಾತ್ರೆ, ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧಾರ್ಮಿಕ ಸಭೆ ಆಯೋಜನೆ

ಜೇವರ್ಗಿ: ತಾಲ್ಲೂಕಿನ ಶಾಖಾಪುರ ಗ್ರಾಮದ ಸದ್ಗುರು ಶ್ರೀ ವಿಶ್ವಾರಾಧ್ಯ ತಪೋವನ ಮಠದಲ್ಲಿ ಲಿಂ. ಸಿದ್ಧರಾಮ ಶಿವಯೋಗಿಗಳ 76ನೇ ಪುಣ್ಯಾರಾಧನೆ ನಿಮಿತ್ತ ಅಕ್ಟೋಬರ್ 31ರಂದು ಜೋಳದ ರೊಟ್ಟಿ ಜಾತ್ರೆ, ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ, ತಪೋವನ ಶ್ರೀ ಪ್ರಶಸ್ತಿ ಪ್ರದಾನ ಹಾಗೂ ಧಾರ್ಮಿಕ ಸಭೆ ಆಯೋಜಿಸಲಾಗಿದೆ ಎಂದು ಮಠದ ಪೀಠಾಧಿಪತಿ ಡಾ. ಸಿದ್ಧರಾಮ ಶಿವಾಚಾರ್ಯರು ತಿಳಿಸಿದ್ದಾರೆ.

ಮಠದಲ್ಲಿ ನಡೆಯುತ್ತಿರುವ ಪುಣ್ಯಾರಾಧನೆ ಕಾರ್ಯಕ್ರಮದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 6 ಗಂಟೆಗೆ ಲಿಂ. ಸಿದ್ಧರಾಮ ಶಿವಯೋಗಿಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ಅಲಂಕಾರ ಹಾಗೂ ರುದ್ರಾಭಿಷೇಕ ನೆರವೇರಿಸಲಾಗುವುದು. ಸಂಜೆ 5 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ರಾತ್ರಿ 8 ಗಂಟೆಗೆ ಧಾರ್ಮಿಕ ಸಭೆ ಜರುಗಲಿದೆ ಎಂದು ಹೇಳಿದರು.

60 ಕ್ವಿಂಟಲ್ ಜೋಳದ ರೊಟ್ಟಿ ಸಿದ್ಧತೆ

ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಭಕ್ತರಿಗೆ ಪ್ರಸಾದ ವಿತರಿಸಲು ಸುಮಾರು 60 ಕ್ವಿಂಟಲ್ ಜೋಳ ಹಾಗೂ ಸಜ್ಜೆಯ ರೊಟ್ಟಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಅಲ್ಲದೆ, ಸುಮಾರು 30 ಕ್ವಿಂಟಲ್ ವಿವಿಧ ಧಾನ್ಯಗಳು ಮತ್ತು ತರಕಾರಿಗಳನ್ನು ಬಳಸಿ ಭಜ್ಜಿ ಪಲ್ಯ ತಯಾರಿಸಲಾಗುತ್ತಿದೆ. ಮಠಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗುವಂತೆ ಪ್ರಸಾದ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಐವರಿಗೆ ತಪೋವನ ಶ್ರೀ ಪ್ರಶಸ್ತಿ

ಅಕ್ಟೋಬರ್ 31ರಂದು ನಡೆಯುವ ಧಾರ್ಮಿಕ ಸಭೆಯಲ್ಲಿ ದೇವಪ್ಪ ಪೂಜಾರಿ (ಚನ್ನಗುಂಡಿ ಹರನೂರು), ಶಾಂತಗೌಡ ಐನಾಪುರ, ಅಶೋಕ ಸಾಲಿಮಠ, ಯಶವಂತರಾಯ ಬಣಮಗಿ ಹಾಗೂ ಸುರೇಶ ಮುತ್ತಕೋಡ ಸೇರಿದಂತೆ ಐವರು ರೈತರಿಗೆ ತಪೋವನ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಡಾ. ಸಿದ್ಧರಾಮ ಶಿವಾಚಾರ್ಯರು ಹೇಳಿದರು.

ಗಣ್ಯರ ಉಪಸ್ಥಿತಿ

ರಾತ್ರಿ 8 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಸಣ್ಣ ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್‌ಸಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಸಭೆಯನ್ನು ಉದ್ಘಾಟಿಸಲಿದ್ದಾರೆ.

ಶಾಸಕ ಅಲ್ಲಮಪ್ರಭು ಪಾಟೀಲ, ಶಾಸಕ ಎಂ.ವೈ. ಪಾಟೀಲ, ಬಸವರಾಜ ಮತ್ತಿಮೂಡ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಡಾ. ಖೇದಾರಲಿಂಗಯ್ಯ ಹಿರೇಮಠ, ಮಲ್ಲಿನಾಥಗೌಡ ಯಲಗೋಡ ಹಾಗೂ ಕಾಶಿರಾಯಗೌಡ ಯಲಗೋಡ ಸೇರಿದಂತೆ ಹಲವು ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚೆನ್ನಮಲ್ಲಯ್ಯ ಹಿರೇಮಠ, ಡಾ. ಪಿ.ಎಂ. ಮಠ, ಎಐಎಸ್ ಹಿರೇಮಠ, ಕಲ್ಯಾಣಕುಮಾರ ಸಂಗಾವಿ, ಅಂಬರೀಶ ರಡ್ಡಿ ಶಾಖಾಪುರ, ವಿರೇಶ ಕಂದಗಲ್, ಸಿದ್ದಣ್ಣಗೌಡ ಹಳ್ಳಿ, ಗುಂಡಪ್ಪ ಹಾಲಗಡ್ಲ, ಭುಜಂಗಪ್ಪ ದೇಶಟ್ಟಿ, ಮಣ್ಣುಗೌಡ ಪಾಟೀಲ, ಸಂಗನ ಬಸಯ್ಯ ಹಿರೇಮಠ, ಬಸವರಾಜ ಬಳಬಟ್ಟಿ ಹಾಗೂ ಸಿದ್ರಾಮಪ್ಪಗೌಡ ಹರನೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button