ನಿಮ್ಮ ನಿಜವಾದ ಶತ್ರು ಯಾರೆಂದು ನಿಮಗೆ ಗೊತ್ತಾ?

ಭಾಗ-2
“ಸಜ್ಜನರ ಸಂಗವದು ಹೆಜ್ಜೇನ ಸವಿದಂತೆ,
ದುರ್ಜನರ ಸಂಗ ಬಚ್ಚಲ ಕೊಚ್ಚೆಯಂತಿಹುದು.” – ಸರ್ವಜ್ಞ
15ನೇ ಶತಮಾನದಲ್ಲಿ ಬದುಕಿದ್ದ ವಚನಕಾರ ಸರ್ವಜ್ಞರ ಈ ಮಾತು ಇಂದಿಗೂ ಅಷ್ಟೇ ಪ್ರಸ್ತುತ. ನಾವು ಯಾರ ಸಂಗ ಮಾಡುತ್ತೇವೆ, ಯಾರ ಮಾತು ಕೇಳುತ್ತೇವೆ ಮತ್ತು ಯಾವ ವಿಚಾರಗಳನ್ನು ನಮ್ಮ ಮನಸ್ಸಿನೊಳಗೆ ಇಳಿಸಿಕೊಳ್ಳುತ್ತೇವೆ ಎಂಬುದೇ ನಮ್ಮ ಬದುಕಿನ ದಿಕ್ಕನ್ನು ನಿರ್ಧರಿಸುತ್ತದೆ.
ನಿಮ್ಮ ಎದುರು ನಿಂತು ನಿಮ್ಮನ್ನು ವಿರೋಧಿಸುವ ವ್ಯಕ್ತಿಯೇ ನಿಮ್ಮ ನಿಜವಾದ ಶತ್ರು ಎಂದು ನೀವು ಭಾವಿಸಿದ್ದರೆ, ಆ ಭಾವನೆ ಬಹುಶಃ ಸಂಪೂರ್ಣ ಸತ್ಯವಾಗಿರಲಿಕ್ಕಿಲ್ಲ.
ಹಾಗಾದರೆ ನಿಮ್ಮ ನಿಜವಾದ ಶತ್ರು ಯಾರು?
ನಿಮ್ಮ ಮನಸ್ಸಿನಲ್ಲಿ ನಿರಂತರವಾಗಿ ಬಿತ್ತಲಾಗುವ ನಕಾರಾತ್ಮಕ ವಿಚಾರಗಳು, ತಪ್ಪು ನಿರೂಪಣೆಗಳು ಮತ್ತು ಅವುಗಳನ್ನು ಪದೇಪದೇ ನಿಮ್ಮ ಮುಂದೆ ಹರಿಬಿಡುವ ಜನರು ನಿಮ್ಮ ಬದುಕಿನ ದೊಡ್ಡ ಅಪಾಯವಾಗಬಹುದು.
ನಿಮ್ಮನ್ನು ನೇರವಾಗಿ ಎದುರಿಸುವ ವ್ಯಕ್ತಿಗಿಂತ, ನಿಮ್ಮ ಯೋಚನಾ ಶಕ್ತಿಯನ್ನೇ ದುರ್ಬಲಗೊಳಿಸುವ ವ್ಯಕ್ತಿ ಹೆಚ್ಚು ಅಪಾಯಕಾರಿ. ಏಕೆಂದರೆ ನೇರವಾಗಿ ಎದುರಿಸುವ ಶತ್ರುವನ್ನು ಗುರುತಿಸುವುದು ಸುಲಭ. ಆದರೆ ಹಿತೈಷಿಯ ಮುಖವಾಡ ಧರಿಸಿ, ನಿಮ್ಮ ಮನಸ್ಸಿನಲ್ಲಿ ಅನುಮಾನ, ಭಯ, ಆತಂಕ, ಅಭದ್ರತೆ ಮತ್ತು ಗೊಂದಲವನ್ನು ಬಿತ್ತುವ ವ್ಯಕ್ತಿಯನ್ನು ಗುರುತಿಸುವುದು ಅಷ್ಟು ಸುಲಭವಲ್ಲ.
ನೀವು ಸರಿಯಾದ ದಾರಿಯಲ್ಲಿ ಸಾಗುತ್ತಿರುವಾಗಲೂ, “ಅದು ಸರಿಯಿಲ್ಲ, ಇದು ಆಗುವುದಿಲ್ಲ, ಅವರು ನಿಮ್ಮ ವಿರುದ್ಧ ಇದ್ದಾರೆ, ನಿಮಗೆ ಮುಂದೆ ಸಮಸ್ಯೆ ಬರುತ್ತದೆ” ಎಂಬ ನಕಾರಾತ್ಮಕ ಮಾತುಗಳನ್ನು ನಿರಂತರವಾಗಿ ಕೇಳುತ್ತಾ ಹೋದರೆ, ಒಂದು ಹಂತದಲ್ಲಿ ನಿಮ್ಮದೇ ನಿರ್ಧಾರಗಳ ಮೇಲೆ ನಿಮಗೆ ಅನುಮಾನ ಮೂಡಬಹುದು.
ನಕಾರಾತ್ಮಕ ನಿರೂಪಣೆಯ ದೊಡ್ಡ ಶಕ್ತಿ ಇದೇ – ಅದು ಮೊದಲು ನಿಮ್ಮ ಪರಿಸ್ಥಿತಿಯನ್ನು ಬದಲಿಸುವುದಿಲ್ಲ; ನಿಮ್ಮ ಮನಸ್ಸನ್ನು ಬದಲಿಸುತ್ತದೆ. ಮನಸ್ಸು ಬದಲಾದ ನಂತರ ನಿಮ್ಮ ನಿರ್ಧಾರಗಳು ಬದಲಾಗುತ್ತವೆ. ನಿರ್ಧಾರಗಳು ಬದಲಾದಾಗ ಬದುಕಿನ ದಿಕ್ಕೇ ಬದಲಾಗುತ್ತದೆ.
ಆದ್ದರಿಂದ ಇಂತಹ ನಕಾರಾತ್ಮಕ ವಿಚಾರಗಳಿಂದ ದೂರವಿರಲು ಉತ್ತಮ ಪುಸ್ತಕಗಳನ್ನು ಓದಿ. ಒಳ್ಳೆಯ ಜನರೊಂದಿಗೆ ಬೆರೆಯಿರಿ. ಹೊಸ ವಿಚಾರಗಳನ್ನು ತಿಳಿದುಕೊಳ್ಳಿ. ನಿಮ್ಮ ಮುಂದೆ ಸದಾ ಮತ್ತೊಬ್ಬರ ಬಗ್ಗೆ ಕೆಟ್ಟ ವಿಚಾರಗಳನ್ನು ತಂದು ಹೇಳುವವರ ಮಾತುಗಳನ್ನು ಅತಿಯಾಗಿ ಗಂಭೀರವಾಗಿ ತೆಗೆದುಕೊಳ್ಳಬೇಡಿ.
ಅಂತಹ ವ್ಯಕ್ತಿ ಪ್ರತಿದಿನ ಯಾರದೋ ಬಗ್ಗೆ ನಕಾರಾತ್ಮಕ ವಿಚಾರವನ್ನು ನಿಮ್ಮ ಮುಂದೆ ಏಕೆ ತರುತ್ತಿದ್ದಾನೆ?
ಆತನ ಉದ್ದೇಶವೇನು?
ಆತ ನಿಮ್ಮಿಂದ ಏನನ್ನು ಬಯಸುತ್ತಿದ್ದಾನೆ?
ನಿಮ್ಮ ಮನಸ್ಸಿನಲ್ಲಿ ಯಾವ ಭಾವನೆಯನ್ನು ಮೂಡಿಸಲು ಪ್ರಯತ್ನಿಸುತ್ತಿದ್ದಾನೆ?
ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪ್ರಾರಂಭಿಸಿದಾಗಲೇ ನಿಜವಾದ ಆಟ ಅರ್ಥವಾಗಲು ಶುರುವಾಗುತ್ತದೆ.
ಆದ್ದರಿಂದ ಸಾಧ್ಯವಾದಷ್ಟು ಸಕಾರಾತ್ಮಕವಾಗಿ ಯೋಚಿಸಿ, ಸಕಾರಾತ್ಮಕ ಜನರ ಸಂಗದಲ್ಲಿರಿ.
ಹಂಸ ಪಕ್ಷಿಯ ಮುಂದೆ ಹಾಲು ಮತ್ತು ನೀರನ್ನು ಇಟ್ಟರೂ, ಅದು ಹಾಲನ್ನು ಮಾತ್ರ ಸ್ವೀಕರಿಸುತ್ತದೆ ಎಂಬ ರೂಪಕವನ್ನು ನಾವು ಕೇಳಿದ್ದೇವೆ. ಅದೇ ರೀತಿ ನಮ್ಮ ಮುಂದೆ ಸಕಾರಾತ್ಮಕ ಮತ್ತು ನಕಾರಾತ್ಮಕ-ಎರಡೂ ರೀತಿಯ ವಿಚಾರಗಳು ಬಂದಾಗ, ನಮ್ಮ ಬದುಕಿಗೆ ಉಪಯುಕ್ತವಾದುದನ್ನು ಮಾತ್ರ ಸ್ವೀಕರಿಸುವ ವಿವೇಕ ನಮ್ಮಲ್ಲಿರಬೇಕು.
ಕೆಟ್ಟ ಮಾತು ಕೇಳದಿರುವುದು ಮಾತ್ರ ಜಾಣ್ಮೆಯಲ್ಲ; ಕೇಳಿದ ಮಾತಿನಲ್ಲಿ ಸತ್ಯ ಯಾವುದು, ವಿಷ ಯಾವುದು ಎಂಬುದನ್ನು ಗುರುತಿಸುವುದೇ ನಿಜವಾದ ಜಾಣ್ಮೆ.
ನೀವು ಯಾವುದೇ ಉದ್ಯೋಗ, ಸಂಸ್ಥೆ, ಪಕ್ಷ, ಸಂಘಟನೆ ಅಥವಾ ವೇದಿಕೆಯಲ್ಲಿ ಗುರುತಿಸಿಕೊಂಡಿದ್ದರೆ, ಅದರ ಆಶಯ ಮತ್ತು ಉದ್ದೇಶಗಳಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ. ಆ ಆಶಯಗಳಿಗೆ ಅನುಗುಣವಾಗಿ ಕೆಲಸ ಮಾಡಲು ನಿಮ್ಮ ಮನಸ್ಸು ಒಪ್ಪದಿದ್ದರೆ, ಅಲ್ಲಿಂದ ಗೌರವಯುತವಾಗಿ ಹೊರಬರುವುದು ಒಳಿತು. ಒಂದೆಡೆ ನಿಂತು ಮತ್ತೊಂದೆಡೆ ಕೆಲಸ ಮಾಡುವುದರಿಂದ ಕೊನೆಗೆ ನಮ್ಮದೇ ವ್ಯಕ್ತಿತ್ವ ಪ್ರಶ್ನಾರ್ಹವಾಗುತ್ತದೆ.
ಜೀವನದಲ್ಲಿ ಕೆಲವೊಮ್ಮೆ ಹತಾಶೆ, ದುಃಖ, ನೋವು, ಕಷ್ಟ ಮತ್ತು ಸಂಕಟಗಳು ಎದುರಾಗುತ್ತವೆ. ಅಂತಹ ಸಂದರ್ಭಗಳಲ್ಲಿ ಆತುರದಿಂದ ಪ್ರತಿಕ್ರಿಯಿಸುವ ಬದಲು ಸಮಾಧಾನಚಿತ್ತದಿಂದ ಸಮಸ್ಯೆಯ ಮೂಲವನ್ನು ಹುಡುಕಿ.
“ಸಮಸ್ಯೆ ಏನು?” ಎನ್ನುವುದಕ್ಕಿಂತ,
“ಸಮಸ್ಯೆ ಏಕೆ ಉದ್ಭವಿಸಿತು?”
ಎಂದು ಪ್ರಶ್ನಿಸಿಕೊಳ್ಳಿ.
ಅದರ ಪರಿಹಾರ ಏನು ಎಂಬುದನ್ನು ಯೋಚಿಸಿ. ಅಗತ್ಯವಿದ್ದರೆ ನಿಮ್ಮ ಮೇಲೆ ನಿಜವಾದ ಕಾಳಜಿ ಇರುವ, ನೀವು ಸಂಪೂರ್ಣವಾಗಿ ನಂಬುವ ಕೆಲವೇ ಕೆಲವು ಹಿರಿಯರೊಂದಿಗೆ ಚರ್ಚಿಸಿ. ಆದರೆ ನಿಮ್ಮ ಸಮಸ್ಯೆಯನ್ನು ಎಲ್ಲರ ಮುಂದೆಯೂ ಅನಗತ್ಯವಾಗಿ ವಿವರಿಸುತ್ತಾ ಹೋಗಬೇಡಿ.
ಪ್ರತಿಯೊಬ್ಬ ಪರಿಚಿತನೂ ನಿಮ್ಮ ಹಿತೈಷಿಯಲ್ಲ. ಪ್ರತಿಯೊಬ್ಬ ಹಿತೈಷಿಯೂ ನಿಮ್ಮ ಆತ್ಮೀಯನಲ್ಲ.
ಕೆಲವೊಮ್ಮೆ ನಮ್ಮ ಮುಂದೆ ಕಾಣಿಸುವ ವ್ಯಕ್ತಿ ಕೇವಲ ಒಂದು ಮುಖವಾಡವಾಗಿರಬಹುದು. ಸಮಸ್ಯೆಯ ಮೂಲ ಇನ್ನೆಲ್ಲೋ ಇರಬಹುದು. ಇದನ್ನು ಅರಿತುಕೊಳ್ಳುವುದು ಮುಖ್ಯ; ಆದರೆ ಅರಿತ ತಕ್ಷಣ ಎಲ್ಲರ ಮುಂದೆ ಹೆಸರು ಹೇಳಿಕೊಂಡು ಆರೋಪ ಮಾಡುವುದು ಮತ್ತೊಂದು ಸಮಸ್ಯೆಗೆ ಕಾರಣವಾಗಬಹುದು.
ಯಾರಾದರೂ ಸಮಸ್ಯೆಯ ಹಿಂದೆ ಇದ್ದಾರೆ ಎಂದು ನಿಮಗೆ ತಿಳಿದರೂ, ಪ್ರತಿಯೊಂದು ವಿಷಯವನ್ನೂ ಬಹಿರಂಗಪಡಿಸುವ ಅಗತ್ಯವಿಲ್ಲ.
ಕೆಲವು ಸತ್ಯಗಳನ್ನು ತಿಳಿದುಕೊಂಡು ಮೌನವಾಗಿರುವುದೂ ಒಂದು ರೀತಿಯ ಶಕ್ತಿ.
ಏಕೆಂದರೆ ನೀವು ಯಾರ ಹೆಸರನ್ನು ಬಹಿರಂಗಪಡಿಸುತ್ತಾ ಹೋಗುತ್ತೀರೋ, ಅಷ್ಟು ಹೆಚ್ಚು ವಿವಾದಗಳು ನಿಮ್ಮ ಸುತ್ತಲೂ ಸೃಷ್ಟಿಯಾಗುತ್ತವೆ. ಕೊನೆಗೆ ಮೂಲ ಸಮಸ್ಯೆ ಬದಿಗೊತ್ತಲ್ಪಟ್ಟು, ನೀವು ಮಾಡಿದ ಆರೋಪವೇ ದೊಡ್ಡ ವಿಷಯವಾಗಿಬಿಡುತ್ತದೆ.
ಆದ್ದರಿಂದ ಸಮಸ್ಯೆಯ ಮೂಲವನ್ನು ಅರ್ಥಮಾಡಿಕೊಳ್ಳಿ. ಯಾರ ಪಾತ್ರ ಏನು ಎಂಬುದನ್ನು ಗಮನಿಸಿ. ಅಗತ್ಯವಿದ್ದರೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಿ. ಆದರೆ ಪ್ರತಿಯೊಂದು ವಿಷಯಕ್ಕೂ ತಕ್ಷಣ ಪ್ರತಿಕ್ರಿಯಿಸಬೇಕೆಂಬ ನಿಯಮವಿಲ್ಲ.
ಸಂಬಂಧ ಕಡಿಯಬೇಡಿ; ಅಂತರ ಕಾಯ್ದುಕೊಳ್ಳಿ
ನಿಮ್ಮಲ್ಲಿ ನಕಾರಾತ್ಮಕ ವಿಚಾರಗಳನ್ನು ತುಂಬುವವರು, ಸಮಸ್ಯೆಗಳನ್ನು ಸೃಷ್ಟಿಸುವವರು ಯಾರೆಂದು ಗುರುತಿಸಿದ ನಂತರವೂ, ಪ್ರತಿಯೊಬ್ಬರೊಂದಿಗೂ ಸಂಬಂಧ ಸಂಪೂರ್ಣವಾಗಿ ಕಡಿದುಕೊಳ್ಳಬೇಕು ಎಂಬುದಿಲ್ಲ.
ಕೆಲವೊಮ್ಮೆ ಕೆಲವು ಸಂಬಂಧಗಳನ್ನು ಊಟದಲ್ಲಿನ ಉಪ್ಪಿನಕಾಯಿಯಂತೆ ಇಟ್ಟುಕೊಳ್ಳಬೇಕಾಗುತ್ತದೆ.
ಅಂದರೆ-ಅಗತ್ಯವಿದ್ದಷ್ಟು ಮಾತ್ರ ಸಂಪರ್ಕ, ಅಗತ್ಯವಿದ್ದಷ್ಟು ಮಾತ್ರ ಮಾತು, ಆದರೆ ನಮ್ಮ ವೈಯಕ್ತಿಕ ವಿಚಾರಗಳು, ದುರ್ಬಲತೆಗಳು ಮತ್ತು ಒಳಗಿನ ವಿಷಯಗಳಿಗೆ ಪ್ರವೇಶ ನೀಡದಿರುವುದು.
ಅಂತರ ಎಂದರೆ ದ್ವೇಷವಲ್ಲ.
ಮೌನ ಎಂದರೆ ಸೋಲಲ್ಲ.
ಎಚ್ಚರಿಕೆ ಎಂದರೆ ಭಯವಲ್ಲ.
ಅದು ಅನುಭವ ಕಲಿಸಿದ ಬದುಕಿನ ಜಾಣ್ಮೆ.
ಸಾಧ್ಯವಾದರೆ ಏಕಾಂತವನ್ನು ಸ್ವಲ್ಪ ಕಲಿಯಿರಿ. ಇಲ್ಲವೇ ನಿಮ್ಮ ಬದುಕಿನಲ್ಲಿ ಕೆಲವೇ ಕೆಲವು ಅತ್ಯಾಪ್ತ ಮತ್ತು ವಿಶ್ವಾಸಾರ್ಹ ಜನರ ಸ್ನೇಹವನ್ನು ಉಳಿಸಿಕೊಳ್ಳಿ.
ಏಕೆಂದರೆ ಜನರ ಸಂಖ್ಯೆ ಹೆಚ್ಚಾದಂತೆ ಸಂಬಂಧಗಳ ಗುಣಮಟ್ಟ ಹೆಚ್ಚುತ್ತದೆ ಎಂಬುದಿಲ್ಲ.
ನಿಮಗೆ ಪರಿಚಯವಿರುವ ಪ್ರತಿಯೊಬ್ಬರೂ ನಿಮ್ಮ ಸ್ನೇಹಿತರಲ್ಲ.
ನಿಮ್ಮೊಂದಿಗೆ ಮಾತನಾಡುವ ಪ್ರತಿಯೊಬ್ಬರೂ ನಿಮ್ಮ ಹಿತೈಷಿಗಳಲ್ಲ.
ನಿಮ್ಮನ್ನು ಹೊಗಳುವ ಪ್ರತಿಯೊಬ್ಬರೂ ನಿಮ್ಮ ಒಳಿತನ್ನು ಬಯಸುವುದಿಲ್ಲ.
ಅದೇ ರೀತಿ ನಿಮ್ಮನ್ನು ವಿರೋಧಿಸುವ ಪ್ರತಿಯೊಬ್ಬರೂ ನಿಮ್ಮ ಶತ್ರುಗಳೂ ಅಲ್ಲ.
ಇದನ್ನು ಅರಿತುಕೊಂಡ ದಿನದಿಂದ ನಮ್ಮ ಬದುಕಿನಲ್ಲಿ ಅನಗತ್ಯ ಗೊಂದಲ ಕಡಿಮೆಯಾಗುತ್ತದೆ.
ನಮ್ಮ ಮನಸ್ಸನ್ನು ಮತ್ತೊಬ್ಬರ ಮಾತಿನ ನಿಯಂತ್ರಣಕ್ಕೆ ಕೊಡುವ ಬದಲು, ನಮ್ಮದೇ ವಿವೇಚನೆ, ಅನುಭವ ಮತ್ತು ಸತ್ಯದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಬೇಕು.
ಕೊನೆಗೆ ಬದುಕು ನಮಗೆ ಕಲಿಸುವ ದೊಡ್ಡ ಪಾಠ ಒಂದೇ
“ನಮ್ಮ ಶತ್ರು ಹೊರಗಿಲ್ಲ;
ನಮ್ಮ ಮನಸ್ಸಿನೊಳಗೆ ಬಿತ್ತಲ್ಪಟ್ಟ ತಪ್ಪು ವಿಚಾರವೇ ನಿಜವಾದ ಶತ್ರು.
ಆ ವಿಚಾರವನ್ನು ಗುರುತಿಸಿ ಹೊರಹಾಕಿದಾಗಲೇ
ನಮ್ಮೊಳಗಿನ ನಿಜವಾದ ಶಕ್ತಿ ಹೊರಬರುತ್ತದೆ.”
ಆದ್ದರಿಂದ ನಕಾರಾತ್ಮಕತೆಯಿಂದ ದೂರವಿರಿ, ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳಿ, ಜನರನ್ನು ಅರ್ಥಮಾಡಿಕೊಳ್ಳಿ, ಆದರೆ ಯಾರಿಗೂ ನಿಮ್ಮ ಮನಸ್ಸಿನ ನಿಯಂತ್ರಣವನ್ನು ಒಪ್ಪಿಸಬೇಡಿ.
ನಾವು ಬದಲಾದರೆ ಭವಿಷ್ಯ ನಿರ್ಮಾಣವಾಗುತ್ತದೆ;
ಬದಲಾಗದೆ ನಕಾರಾತ್ಮಕತೆಯ ಬಲೆಗೆ ಸಿಲುಕಿದರೆ ವಿನಾಶ ಖಚಿತ.
– ಭೀಮನಗೌಡ ಜಿ. ಪರಗೊಂಡ



