ಗುರುಗಳನ್ನು ಸ್ಮರಿಸಿ ಗೌರವಿಸಿದ 2001ರ ಬ್ಯಾಚ್ ವಿದ್ಯಾರ್ಥಿಗಳು

ಕೆಂಭಾವಿ: ಸಮೀಪದ ಮಲ್ಲಾ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 2001ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ವತಿಯಿಂದ ಸೆ.19ರಂದು ಆಯೋಜಿಸಿದ್ದ ‘ಗುರುವಂದನಾ’ ಹಾಗೂ ಸ್ನೇಹ ಸಮ್ಮೇಳನ ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮದಲ್ಲಿ 1993ರಲ್ಲಿ ಪ್ರಾಥಮಿಕ ಹಂತದಲ್ಲಿ ಅಕ್ಷರಾಭ್ಯಾಸ ಮಾಡಿಸಿದ ನಿವೃತ್ತ ಶಿಕ್ಷಕರಾದ ಬಸವರಾಜ ಯತ್ನಾಳ, ಖಾಜೇಸಾಬ್, ಪ್ರಕಾಶ್ ಹಾಗೂ ಪ್ರಸ್ತುತ ಸೇವೆಯಲ್ಲಿರುವ ಬಿ.ಆರ್. ಗೌಂಡಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಪ್ರೌಢಶಾಲಾ ಹಂತದಲ್ಲಿ ಮಾರ್ಗದರ್ಶನ ನೀಡಿದ ಶಿಕ್ಷಕರಾದ ಬಸವರಾಜ ಮಲ್ಲೆ, ಹಣಮಂತ ಪೂಜಾರಿ, ಭಾಗಪ್ಪ ಮೂಲಿ, ಶಿವಲಿಂಗಪ್ಪ ಶಿರೋಳ, ಅನ್ನಪೂರ್ಣ ಮೇಡಂ, ಸುರೇಶ ಬಾಬು, ಯಲ್ಲಪ್ಪ, ಶಿವಯೋಗಪ್ಪ ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸಹ ಶಿಕ್ಷಕರನ್ನೂ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ಶಿಕ್ಷಕರು ಮಾತನಾಡಿ, ‘ಹಳೆಯ ವಿದ್ಯಾರ್ಥಿಗಳು ತಮ್ಮ ಬಾಲ್ಯದ ಶಿಕ್ಷಣ ಹಾಗೂ ಗುರುಗಳನ್ನು ಸ್ಮರಿಸಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಹರ್ಷ ವ್ಯಕ್ತಪಡಿಸಿದರು. ಶಾಲಾ ದಿನಗಳ ಮಧುರ ಬಾಂಧವ್ಯ ಹಾಗೂ ಸಿಹಿ–ಕಹಿ ನೆನಪುಗಳನ್ನು ಮೆಲುಕು ಹಾಕಿದರು.
2001ರ ಬ್ಯಾಚ್ನ ವಿದ್ಯಾರ್ಥಿಗಳಾದ ಪರಶುರಾಮ, ಶಿವಾನಂದ, ಬಸವರಾಜ ಎಚ್., ಡಾ. ಹಣಮಂತ, ಗುರುಬಸಪ್ಪ, ವಿನೋದ, ಯಮನಪ್ಪ, ಹಳ್ಳೆಪ್ಪ, ಬಸವರಾಜ ಟಿ., ದೇವಿಂದ್ರಪ್ಪ, ಅಪ್ಪಾಸಾಹೇಬ ಹಾಗೂ ವಿದ್ಯಾರ್ಥಿನಿಯರಾದ ಶಕುಂತಲಾ, ಈಶ್ವರಮ್ಮ, ಮಲ್ಲಮ್ಮ, ಶಿವಲೀಲಾ, ದ್ರಾಕ್ಷಾಯಿಣಿ, ಸುಧಾರಾಣಿ, ಸುನೀತಾ, ಮಹಾದೇವಿ, ಸುವರ್ಣ ತಮ್ಮ ಅನಿಸಿಕೆ ಹಂಚಿಕೊಂಡರು. ಗುರುಗಳ ಮೇಲಿನ ಆದರ–ಗೌರವ ಹಾಗೂ ವಿದ್ಯಾರ್ಥಿಗಳ ನಡುವಿನ ಒಗ್ಗಟ್ಟು ಮುಂದೆಯೂ ಹೀಗೆಯೇ ಮುಂದುವರಿಯಲಿ ಎಂದು ಆಶಿಸಿದರು.
ಶ್ರೀದೇವಿ ಸಜ್ಜನ್ ಪ್ರಾರ್ಥಿಸಿದರು. ಪ್ರಸನ್ನ ಅಂಗಡಿ ಸ್ವಾಗತಿಸಿದರು. ಶಿವಕುಮಾರ ಜಮಖಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಸಹ ಶಿಕ್ಷಕ ಆನಂದ್ ನಿರೂಪಿಸಿದರು. ಮಂಜು ಕೊಂಬಿನ ಹಾಡಿನ ಮೂಲಕ ವಂದನಾರ್ಪಣೆ ನೆರವೇರಿಸಿದರು.



