ಬಿಗ್‌ಬಾಸ್ ಸ್ಪರ್ಧಿ ಮಲ್ಲಮ್ಮಗೆ ಆಸರೆಯಾಗಿದ್ದ ವಸ್ತ್ರ ವಿನ್ಯಾಸಕಿ ಪಲ್ಲವಿ ಲಕ್ಷ್ಮಿಕಾಂತ್ ನಿಧನ

ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಮಲ್ಲಮ್ಮ ಅವರಿಗೆ ಬೆಂಬಲವಾಗಿ ನಿಂತಿದ್ದ ಖ್ಯಾತ ವಸ್ತ್ರ ವಿನ್ಯಾಸಕಿ ಹಾಗೂ ‘ರಿಷಿ ಡಿಸೈನ್’ ಸಂಸ್ಥೆಯ ಮಾಲಕಿ ಪಲ್ಲವಿ ಲಕ್ಷ್ಮಿಕಾಂತ್ ಅವರು ಭಾನುವಾರ ಹಠಾತ್ತನೆ ನಿಧನರಾಗಿದ್ದಾರೆ. ಅವರ ನಿಧನಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬಂದಿದ್ದ ಮಲ್ಲಮ್ಮ ಅವರಿಗೆ ಪಲ್ಲವಿ ಲಕ್ಷ್ಮಿಕಾಂತ್ ಅವರು ಉಳಿದುಕೊಳ್ಳಲು ಆಶ್ರಯ ಕಲ್ಪಿಸುವುದರ ಜೊತೆಗೆ ತಮ್ಮ ಬೊಟಿಕ್‌ನಲ್ಲಿ ಉದ್ಯೋಗದ ಅವಕಾಶವನ್ನೂ ನೀಡಿದ್ದರು ಎನ್ನಲಾಗಿದೆ. ಮಲ್ಲಮ್ಮ ಅವರನ್ನು ಕೇವಲ ಉದ್ಯೋಗಿಯಂತೆ ಕಾಣದೆ, ಮನೆಯ ಸದಸ್ಯೆಯಂತೆ ಪ್ರೀತಿಯಿಂದ ನೋಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಮಲ್ಲಮ್ಮ ಅವರು ಬಿಗ್‌ಬಾಸ್ ಕನ್ನಡ ಸೀಸನ್ 12ಕ್ಕೆ ಪ್ರವೇಶಿಸುವಲ್ಲಿ ಪಲ್ಲವಿ ಲಕ್ಷ್ಮಿಕಾಂತ್ ಅವರ ಬೆಂಬಲ ಪ್ರಮುಖವಾಗಿತ್ತು. ಕಿರುತೆರೆ ನಟ ಮನೋಜ್ ಕುಮಾರ್ ಅವರೊಂದಿಗೆ ಪಲ್ಲವಿ ಅವರು ಮಲ್ಲಮ್ಮ ಅವರ ಬೆನ್ನಿಗೆ ನಿಂತು ಬಿಗ್‌ಬಾಸ್ ವೇದಿಕೆ ತಲುಪಲು ನೆರವಾಗಿದ್ದರು.
ಮಲ್ಲಮ್ಮ ಅವರು ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ ಸಂದರ್ಭದಲ್ಲಿಯೂ, ಬಳಿಕ ಮನೆಯಿಂದ ಹೊರಬಂದಾಗಲೂ ನಿರೂಪಕ ಕಿಚ್ಚ ಸುದೀಪ್ ಅವರು ಪಲ್ಲವಿ ನೀಡಿದ ಬೆಂಬಲವನ್ನು ಮೆಚ್ಚಿ ಮಾತನಾಡಿದ್ದರು. ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕವೂ ಮಲ್ಲಮ್ಮ ಅವರು ಹಲವು ಸಂದರ್ಶನಗಳಲ್ಲಿ ಪಲ್ಲವಿ ಅವರನ್ನು ಕೃತಜ್ಞತೆಯಿಂದ ಸ್ಮರಿಸಿದ್ದರು.
ಪಲ್ಲವಿ ಲಕ್ಷ್ಮಿಕಾಂತ್ ಅವರು ಸ್ಯಾಂಡಲ್‌ವುಡ್‌ನ ಹಲವು ನಟ-ನಟಿಯರು ಹಾಗೂ ಗಣ್ಯರಿಗೆ ವಸ್ತ್ರ ವಿನ್ಯಾಸ ಮಾಡುತ್ತಿದ್ದ ಪ್ರಸಿದ್ಧ ಡಿಸೈನರ್ ಆಗಿದ್ದರು. ಅವರ ಹಠಾತ್ ನಿಧನದ ಸುದ್ದಿ ಕಿರುತೆರೆ ಮತ್ತು ಫ್ಯಾಷನ್ ಕ್ಷೇತ್ರದಲ್ಲಿ ಆಘಾತ ಮೂಡಿಸಿದ್ದು, ಆಪ್ತರು, ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.



