ಮೋಜಿಣಿ ಜಮೀನು ಅಳತೆ ಶುಲ್ಕ ಪರಿಷ್ಕರಣೆ: ಅ.1ರಿಂದ ಹೊಸ ದರ ಜಾರಿ

ಬೆಂಗಳೂರು:
ರಾಜ್ಯದಲ್ಲಿ ಜಮೀನುಗಳ ಅಳತೆಗಾಗಿ ಮೋಜಿಣಿ ವ್ಯವಸ್ಥೆಯಡಿ ಸಾರ್ವಜನಿಕರು ಸಲ್ಲಿಸುವ ವಿವಿಧ ಅರ್ಜಿಗಳ ಶುಲ್ಕ ಹಾಗೂ ಪರವಾನಗಿ ಭೂಮಾಪಕರಿಗೆ ನೀಡಲಾಗುವ ಸೇವಾ ಸಂಭಾವನೆಯನ್ನು ಕಂದಾಯ ಇಲಾಖೆ ಪರಿಷ್ಕರಿಸಿದೆ. ಪರಿಷ್ಕೃತ ದರಗಳು ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ.
ಈ ಕುರಿತು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಎಂ.ಎ. ಮಹಾಲಕ್ಷ್ಮಿ ಅವರು ಆದೇಶ ಹೊರಡಿಸಿದ್ದಾರೆ. ಈಗಾಗಲೇ ಅಳತೆಗಾಗಿ ಸ್ವೀಕೃತವಾಗಿ ಬಾಕಿ ಇರುವ ಹಳೆಯ ಅರ್ಜಿಗಳಿಗೆ ಪರಿಷ್ಕೃತ ದರ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆ–1964ರ ಕಲಂ 131(ಬಿ) ಅಡಿಯಲ್ಲಿ ಪಹಣಿಯ (ಆರ್ಟಿಸಿ) 9ನೇ ಕಾಲಂನಲ್ಲಿರುವ ಅರ್ಜಿದಾರರ ಹಕ್ಕಿನ ವಿಸ್ತೀರ್ಣಕ್ಕೆ ಅನುಗುಣವಾಗಿ ಹೊಸ ಶುಲ್ಕ ನಿಗದಿಪಡಿಸಲಾಗಿದೆ.
11ಇ ನಕ್ಷೆ, ಅಲಿನೇಷನ್ ಪೂರ್ವ ನಕ್ಷೆ, ತತ್ಕಾಲ್ ಪೋಡಿ: ನಗರ ಪ್ರದೇಶದಲ್ಲಿ ಎರಡು ಎಕರೆವರೆಗೆ ₹3,200 ಶುಲ್ಕ ನಿಗದಿಪಡಿಸಲಾಗಿದೆ. ಎರಡು ಎಕರೆ ಮೀರಿದರೆ ಪ್ರತಿ ಎಕರೆ ಅಥವಾ ಅದರ ಭಾಗಕ್ಕೆ ₹1,000 ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಎರಡು ಎಕರೆವರೆಗೆ ₹2,300 ಹಾಗೂ ನಂತರದ ಪ್ರತಿ ಎಕರೆ ಅಥವಾ ಅದರ ಭಾಗಕ್ಕೆ ₹400 ಶುಲ್ಕ ನಿಗದಿಯಾಗಿದೆ.
ಹದ್ದುಬಸ್ತು (ಗಡಿ ಗುರುತಿಸುವಿಕೆ): ನಗರ ಪ್ರದೇಶದಲ್ಲಿ ಎರಡು ಎಕರೆವರೆಗೆ ₹2,500 ಹಾಗೂ ಹೆಚ್ಚುವರಿ ಪ್ರತಿ ಎಕರೆಗೆ ₹400 ಶುಲ್ಕ ಇರಲಿದೆ. ಗ್ರಾಮೀಣ ಪ್ರದೇಶದಲ್ಲಿ ಎರಡು ಎಕರೆವರೆಗೆ ₹1,000 ಮತ್ತು ನಂತರದ ಪ್ರತಿ ಎಕರೆಗೆ ₹300 ಶುಲ್ಕ ನಿಗದಿಯಾಗಿದೆ.
ನೋಟಿಸ್ ಶುಲ್ಕವನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಪ್ರತಿ ಬಾಜುದಾರರಿಗೆ ₹25 ಎಂದು ನಿಗದಿಪಡಿಸಲಾಗಿದೆ.
ಸರ್ವೇಯರ್ಗಳ ಸಂಭಾವನೆ ಹೆಚ್ಚಳ: ಪೂರ್ಣ ಪ್ರಮಾಣದಲ್ಲಿ ಅಳತೆ ಮಾಡಿ ವಿವರಗಳನ್ನು ಅಪ್ಲೋಡ್ ಮಾಡಿ ಇತ್ಯರ್ಥಗೊಳಿಸಿದ ಪ್ರತಿ ಅರ್ಜಿಗೆ ಪರವಾನಗಿ ಭೂಮಾಪಕರಿಗೆ ನೀಡುತ್ತಿದ್ದ ₹1,200 ಸಂಭಾವನೆಯನ್ನು ₹2,000ಕ್ಕೆ ಹೆಚ್ಚಿಸಲಾಗಿದೆ. ಬಹುಮಾಲೀಕತ್ವದ ಸಂದರ್ಭದಲ್ಲಿ ಪ್ರತಿ ಹೆಚ್ಚುವರಿ ಹಿಸ್ಸಾ ಬ್ಲಾಕ್ಗೆ ನೀಡುತ್ತಿದ್ದ ₹200 ಅನ್ನು ₹300ಕ್ಕೆ ಪರಿಷ್ಕರಿಸಲಾಗಿದೆ.
ರೋವರ್ ಸೇರಿದಂತೆ ಸುಧಾರಿತ ತಂತ್ರಜ್ಞಾನ ಬಳಸಿ ಅಳತೆ ಮಾಡಿದಲ್ಲಿ, ಇತ್ಯರ್ಥವಾದ ಪ್ರತಿ ಅರ್ಜಿಗೆ ₹1,000 ಹಾಗೂ ಹೆಚ್ಚುವರಿ ಹಿಸ್ಸಾ ಬ್ಲಾಕ್ಗೆ ₹200 ಸಂಭಾವನೆ ನಿಗದಿಪಡಿಸಲಾಗಿದೆ.
ಖಜಾನೆ–2 ಮೂಲಕ ನೇರ ಪಾವತಿ: ಪರವಾನಗಿ ಭೂಮಾಪಕರಿಗೆ ಸೇವಾ ಸಂಭಾವನೆ ಪಾವತಿಸುವಲ್ಲಿ ಉಂಟಾಗುತ್ತಿದ್ದ ವಿಳಂಬ ತಪ್ಪಿಸಲು ಹಾಗೂ ಕೇಂದ್ರ ಕಚೇರಿಯ ಮೇಲಿನ ಆಡಳಿತಾತ್ಮಕ ಹೊರೆ ಕಡಿಮೆ ಮಾಡಲು ‘ಖಜಾನೆ–2’ ತಂತ್ರಾಂಶದ ಮೂಲಕ ನೇರವಾಗಿ ಸಂಭಾವನೆ ಪಾವತಿಸಲು ಸರ್ಕಾರ ನಿರ್ಧರಿಸಿದೆ.
ಶುಲ್ಕ ಪರಿಷ್ಕರಣೆಗೆ ಕಾರಣ: ಸರ್ಕಾರದ ಪೋಡಿ ಮುಕ್ತ ಅಭಿಯಾನ, ದರಖಾಸ್ತು ಪೋಡಿ ಹಾಗೂ ಬಗರ್ ಹುಕುಂ ಪ್ರಕರಣಗಳಲ್ಲಿ ಅರ್ಜಿದಾರರಿಂದ ಯಾವುದೇ ಶುಲ್ಕ ಪಡೆಯದೆ ಉಚಿತವಾಗಿ ಪೋಡಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಕಾರ್ಯಕ್ಕೆ ಬಳಸುವ ಪರವಾನಗಿ ಭೂಮಾಪಕರ ಸಂಭಾವನೆಯನ್ನು ಸಾರ್ವಜನಿಕರಿಂದ ಸಂಗ್ರಹವಾಗುವ ಸಾಮಾನ್ಯ ಸರ್ವೇ ಶುಲ್ಕದ ಉಳಿತಾಯ ಮೊತ್ತದಿಂದ ಭರಿಸಲಾಗುತ್ತಿತ್ತು. ಕೆರೆ ಹಾಗೂ ಅರಣ್ಯ ಪ್ರದೇಶಗಳ ಅಳತೆಗೂ ಇದೇ ನಿಧಿಯನ್ನು ಬಳಸಲಾಗುತ್ತಿತ್ತು.
2021 ಮತ್ತು 2022ರ ಬಳಿಕ ಸರ್ವೇ ಶುಲ್ಕ ಪರಿಷ್ಕರಣೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸರ್ವೇ ಆಯುಕ್ತರು ಸಲ್ಲಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಿ, ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಹೊಸ ದರಗಳನ್ನು ಜಾರಿಗೊಳಿಸಲಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.
