ಜೋಕುಮಾರ ಸ್ವಾಮಿ ಆಚರಣೆಗೆ ₹51 ಸಾವಿರ ಗೌರವಧನ ನೀಡಲು ಆಗ್ರಹ

ಕಲಬುರಗಿ: ಕೋಲಿ, ಕಬ್ಬಲಿಗ, ಬೆಸ್ತ, ಟೋಕರೆಕೋಲಿ, ವಾಲಿಕಾರ, ಜಮಾದಾರ, ನಾಯಿಕೋಡಿ, ನಾಟಕಾರ ಸೇರಿದಂತೆ ವಿವಿಧ ಬುಡಕಟ್ಟು ಸಮುದಾಯಗಳು ತಲೆತಲಾಂತರಗಳಿಂದ ಆಚರಿಸಿಕೊಂಡು ಬರುತ್ತಿರುವ ಜೋಕುಮಾರ ಸ್ವಾಮಿ ಉತ್ಸವಕ್ಕೆ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಸಾಹಿತ್ಯ ಪರಿಷತ್ತು ಒತ್ತಾಯಿಸಿದೆ.
ಗಜಾನನ ಉತ್ಸವದ ಬಳಿಕ ಸಾಂಪ್ರದಾಯಿಕವಾಗಿ ಆಚರಿಸಲಾಗುವ ಜೋಕುಮಾರ ಸ್ವಾಮಿ ಉತ್ಸವದಲ್ಲಿ ಮಣ್ಣಿನಿಂದ ತಯಾರಿಸಿದ ಜೋಕುಮಾರ ಸ್ವಾಮಿಯ ಮೂರ್ತಿಯನ್ನು ಮರದ ಬುಟ್ಟಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಬುಡಕಟ್ಟು ಸಮುದಾಯದ ಮಹಿಳೆಯರು ಮನೆಮನೆಗೆ ತೆರಳಿ ಜೋಕುಮಾರ ಸ್ವಾಮಿಯ ಹಾಡುಗಳನ್ನು ಹಾಡಿ, ಪ್ರತಿಯಾಗಿ ದವಸ–ಧಾನ್ಯಗಳನ್ನು ಸ್ವೀಕರಿಸುವ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಈ ಸಮುದಾಯಗಳ ಅನೇಕ ಕುಟುಂಬಗಳು ಆರ್ಥಿಕವಾಗಿ ಹಿಂದುಳಿದಿದ್ದು, ಶಿಕ್ಷಣ, ಉದ್ಯೋಗ, ಆರೋಗ್ಯ ಸೇರಿದಂತೆ ಹಲವು ಸರ್ಕಾರಿ ಸೌಲಭ್ಯಗಳಿಂದ ವಂಚಿತವಾಗಿವೆ. ಅರ್ಹರಿಗೆ ಜಾತಿ ಹಾಗೂ ಸಿಂಧುತ್ವ ಪ್ರಮಾಣಪತ್ರಗಳನ್ನು ಯಾವುದೇ ಅಡೆತಡೆಯಿಲ್ಲದೆ ವಿತರಿಸುವುದರ ಜೊತೆಗೆ, ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಪರಿಷತ್ತು ಮನವಿ ಮಾಡಿದೆ.
ಪ್ರತಿ ಗ್ರಾಮದಲ್ಲಿಯೂ ಜೋಕುಮಾರ ಸ್ವಾಮಿ ಆಚರಣೆ ನಡೆಸಲು ವಾರ್ಷಿಕವಾಗಿ ₹51 ಸಾವಿರ ಗೌರವಧನ ನೀಡಬೇಕು. ಅಲ್ಲದೆ, ಬುಡಕಟ್ಟು ಸಮುದಾಯದ ಕುಲಕಸುಬು, ಕಲೆ ಹಾಗೂ ಜೋಕುಮಾರ ಸ್ವಾಮಿ ಹಾಡುಗಳನ್ನು ಉಳಿಸಿ ಬೆಳೆಸುತ್ತಿರುವ ಮಹಿಳೆಯರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಿಕ ಸಂಭಾವನೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಈ ಕುರಿತು ಪರಿಷತ್ತಿನ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಡಾ. ಟಿ.ಡಿ. ರಾಜ್ ಅವರು ಜಿಲ್ಲಾಧಿಕಾರಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರೊ. ಎಲ್.ಬಿ. ಭಟ್ಟಿನ, ಶ್ರೀದೇವಪ್ಪ ಪಂಡರಿ, ಮಲ್ಲಿಕಾರ್ಜುನ ಕಲಬೇನೂರು, ವಕೀಲರು, ಬಾಬುರಾವ್ ಜಮಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.



