ಕಲಬುರಗಿಜಿಲ್ಲೆ ಸುದ್ದಿ

ನೀಲಿ ಶಾಲನ್ನು ಕೆಣಕಿದರೆ ಸುಮ್ಮನಿರಲ್ಲ: ಪ್ರತಾಪ್ ಸಿಂಹಗೆ ಮಲ್ಲಿಕಾರ್ಜುನ ಕಾಳಗಿ ಎಚ್ಚರಿಕೆ

ಚಿತ್ತಾಪುರ: ಮೈಸೂರಿನಲ್ಲಿ ದಲಿತ ಸಂಘರ್ಷ ಸಮಿತಿ (ದಸಂಸ) ಹಮ್ಮಿಕೊಂಡಿದ್ದ ‘ಸೌಹಾರ್ದ ನಡಿಗೆ’ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಹೇಳಿಕೆಯನ್ನು ಹಿಂಪಡೆದು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸಂಸ ಹಾಗೂ ದಲಿತ ಚಳವಳಿಯ ಇತಿಹಾಸ ಅರಿಯದೆ ಪ್ರತಾಪ್ ಸಿಂಹ ಅವರು ದಲಿತ ಸಂಘಟನೆ ಮತ್ತು ನೀಲಿ ಶಾಲಿನ ಕುರಿತು ಹಗುರವಾಗಿ ಮಾತನಾಡಿರುವುದು ಖಂಡನೀಯ ಎಂದು ಹೇಳಿದರು.

“ನೀಲಿ ಶಾಲಿನ ಶಕ್ತಿಯನ್ನು ಅರಿಯದೆ ಮಾತನಾಡಬಾರದು. ನೀಲಿ ಶಾಲನ್ನು ಕೆಣಕಿದರೆ ನಾವು ಸುಮ್ಮನಿರಲು ಸಾಧ್ಯವಿಲ್ಲ,” ಎಂದು ಕಾಳಗಿ ಎಚ್ಚರಿಕೆ ನೀಡಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದಿರುವ ಪ್ರತಾಪ್ ಸಿಂಹ ಅವರು ಮೊದಲು ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆ ಹಾಗೂ ಸಂವಿಧಾನದ ಆಶಯಗಳನ್ನು ಅಧ್ಯಯನ ಮಾಡಬೇಕು. ಜಾತಿ–ಧರ್ಮಗಳ ನಡುವೆ ವೈಮನಸ್ಸು ಉಂಟುಮಾಡುವಂತಹ ಹೇಳಿಕೆಗಳನ್ನು ನೀಡುವುದನ್ನು ಅವರು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಹೇಳಿಕೆಗಳನ್ನು ಕೂಡಲೇ ಹಿಂಪಡೆಯದಿದ್ದರೆ, ದಲಿತ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಲಿದೆ ಎಂದು ಕಾಳಗಿ ಎಚ್ಚರಿಸಿದರು.

Related Articles

Leave a Reply

Your email address will not be published. Required fields are marked *

Back to top button