ತಿಲಕರಿಂದ ಸಾರ್ವಜನಿಕ ಗಣೇಶೋತ್ಸವ ಆರಂಭ: ಭಾರತಿ ದಂಡೋತಿ

ಚಿತ್ತಾಪುರ: ಬ್ರಿಟಿಷರ ಆಡಳಿತದ ಸಂದರ್ಭದಲ್ಲಿ ಸಭೆ-ಸಮಾರಂಭ ಹಾಗೂ ಜನರು ಗುಂಪಾಗಿ ಸೇರುವುದಕ್ಕೆ ನಿರ್ಬಂಧವಿದ್ದ ಹಿನ್ನೆಲೆಯಲ್ಲಿ ಜನರಲ್ಲಿ ರಾಷ್ಟ್ರೀಯತೆ ಮತ್ತು ಸ್ವಾತಂತ್ರ್ಯದ ಜಾಗೃತಿ ಮೂಡಿಸಲು ಲೋಕಮಾನ್ಯ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ ನೀಡಿದರು ಎಂದು ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಹೇಳಿದರು.
ಪಟ್ಟಣದ ವರುಣ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಮಹಾಗಣಪತಿ ಉತ್ಸವ ಮಂಡಳಿ ವತಿಯಿಂದ ಮಂಗಳವಾರ ಸಂಜೆ ಆಯೋಜಿಸಿದ್ದ ಪ್ರಥಮ ವರ್ಷದ ಮಹಾಗಣಪತಿ ಉತ್ಸವ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮನೆಯಲ್ಲಷ್ಟೇ ಆಚರಿಸುತ್ತಿದ್ದ ಗಣೇಶ ಹಬ್ಬವನ್ನು ತಿಲಕರು ಸಾರ್ವಜನಿಕ ಉತ್ಸವವನ್ನಾಗಿ ಪರಿವರ್ತಿಸಿದರು. ಅಂದಿನಿಂದ ಜಾತಿ, ಮತ, ಪಂಥದ ಭೇದವಿಲ್ಲದೆ ದೇಶದಾದ್ಯಂತ ಜನರು ಒಗ್ಗೂಡಿ ಗಣೇಶೋತ್ಸವವನ್ನು ಆಚರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಗಣೇಶೋತ್ಸವಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಎಲ್ಲ ದೇವತೆಗಳಲ್ಲಿ ಗಣಪತಿಗೆ ವಿಶೇಷ ಸ್ಥಾನವಿದ್ದು, ಯಾವುದೇ ಶುಭ ಕಾರ್ಯಕ್ಕೂ ಮುನ್ನ ಗಣೇಶನ ಪೂಜೆ ಸಲ್ಲಿಸಲಾಗುತ್ತದೆ. ಶ್ರದ್ಧೆ ಮತ್ತು ಭಕ್ತಿಯಿಂದ ಪೂಜಿಸಿದರೆ ಕಾರ್ಯಗಳು ಸಿದ್ಧಿಯಾಗುತ್ತವೆ ಎಂದರು.
ಮಹಾಗಣಪತಿ ಉತ್ಸವ ಮಂಡಳಿ ಅಧ್ಯಕ್ಷ ಮೈಪಾಲ್ ಮೂಲಿಮನಿ ಹೊಸೂರ್ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ್ ದೇಶಮುಖ್ ಕಾರ್ಯಕ್ರಮ ಉದ್ಘಾಟಿಸಿದರು. ಅಗ್ನಿಶಾಮಕ ಠಾಣಾಧಿಕಾರಿ ನಾಗರಾಜ ನಾಯಕ್, ಅಶೋಕ ರೆಡ್ಡಿ ಗೌಡ ಅಲ್ಲೂರ, ಬಸವರಾಜ ಗೌಡ ಮಾಲಿಪಾಟೀಲ ದಂಡಗುಂಡ, ಬಸವರಾಜ ಗೌಡ ಮಾಲಿಪಾಟೀಲ ಆಲೂರ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.
ಶರಣಬಸಪ್ಪ ಗಾರಂಪಳ್ಳಿ, ಮರಲಿಂಗ ದೊಡ್ಡಮನಿ, ವಸಂತ ಕಾಶಿ, ರೋಹಿತ್ ಚವ್ಹಾಣ, ಪ್ರಭು ಹಲಕರ್ಟಿ, ಜಯಂತ್ ಕುಲಕರ್ಣಿ, ಶರಣು ಸೂಲಹಳ್ಳಿ, ವಿಶ್ವನಾಥ ರೆಡ್ಡಿ ಇಜಾರ್, ಕೋಟೇಶ್ವರ ರೇಷ್ಮೆ, ಅಂಬರೀಷ್ ಸುಲೇಗಾಂವ ಸೇರಿದಂತೆ ಉತ್ಸವ ಮಂಡಳಿ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.



