ಗೋಕುಲ್ ನಗರ ರಸ್ತೆ, ಚರಂಡಿ ಕಾಮಗಾರಿ ಕಳಪೆ: ಸಮಗ್ರ ತನಿಖೆಗೆ ಜಯ ಕರ್ನಾಟಕ ಸೇನೆ ಆಗ್ರಹ

ಕಲಬುರಗಿ: ನಗರದ ವಾರ್ಡ್ ಸಂಖ್ಯೆ 11ರ ಗೋಕುಲ್ ನಗರದಲ್ಲಿ ಅಂದಾಜು ₹1.25 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ರಸ್ತೆ ಹಾಗೂ ಚರಂಡಿ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಆರೋಪಿಸಿ ಜಯ ಕರ್ನಾಟಕ ಸೇನೆಯ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಲೋಕೋಪಯೋಗಿ ಇಲಾಖೆಗೆ ದೂರು ಸಲ್ಲಿಸಲಾಗಿದೆ.
ಕಾಮಗಾರಿಯಲ್ಲಿ ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಬಳಸದೆ ಕಳಪೆ ಗುಣಮಟ್ಟದ ಸಿಮೆಂಟ್, ಕಂಕರ್ ಸೇರಿದಂತೆ ಇತರ ವಸ್ತುಗಳನ್ನು ಬಳಸಲಾಗುತ್ತಿದೆ ಎಂದು ಸಂಘಟನೆ ಆರೋಪಿಸಿದೆ. ಚರಂಡಿಯ ಕೆಳಭಾಗದಲ್ಲಿ ಸೂಕ್ತ ಬೆಡ್ ಹಾಕದೆ ಕಾಮಗಾರಿ ನಡೆಸಲಾಗುತ್ತಿದೆ. ರಸ್ತೆ ನಿರ್ಮಾಣದಲ್ಲಿಯೂ ಮೊದಲ ಹಂತದಲ್ಲಿ ಮುರುಂ ಹಾಕದೆ ಹಳೆಯ ರಸ್ತೆಯ ಮೇಲೆಯೇ ಸಿಸಿ ರಸ್ತೆ ನಿರ್ಮಿಸಲಾಗುತ್ತಿದೆ. ಇದರಿಂದ ರಸ್ತೆ ಶೀಘ್ರದಲ್ಲೇ ಹಾಳಾಗುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಂದಾಜು ₹1.25 ಕೋಟಿ ಅನುದಾನವಿದ್ದರೂ ಗುಣಮಟ್ಟದ ಕಾಮಗಾರಿ ಕೈಗೊಳ್ಳುತ್ತಿಲ್ಲ. ಆದ್ದರಿಂದ ಕಾಮಗಾರಿಯನ್ನು ಕೂಡಲೇ ತಡೆಹಿಡಿದು, ಸಂಪೂರ್ಣ ಕಾಮಗಾರಿಯ ತಾಂತ್ರಿಕ ಹಾಗೂ ಗುಣಮಟ್ಟದ ತನಿಖೆ ನಡೆಸಬೇಕು ಎಂದು ಜಯ ಕರ್ನಾಟಕ ಸೇನೆ ಒತ್ತಾಯಿಸಿದೆ.
ತನಿಖೆ ಪೂರ್ಣಗೊಳ್ಳುವವರೆಗೆ ಗುತ್ತಿಗೆದಾರರಿಗೆ ಯಾವುದೇ ಬಿಲ್ ಬಿಡುಗಡೆ ಮಾಡಬಾರದು. ಕಾಮಗಾರಿಯಲ್ಲಿ ಲೋಪ ಕಂಡುಬಂದಲ್ಲಿ ಗುತ್ತಿಗೆದಾರರ ಪರವಾನಗಿಯನ್ನು ಕಪ್ಪುಪಟ್ಟಿಗೆ ಸೇರಿಸುವುದು ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಮನವಿಗೆ ಕೂಡಲೇ ಸ್ಪಂದಿಸದಿದ್ದರೆ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಡಾ. ದತ್ತು ಹೆಚ್. ಭಾಸಗಿ ಎಚ್ಚರಿಕೆ ನೀಡಿದ್ದಾರೆ.



