ಖರ್ಗೆ ತೆರಳಿದ ಬಳಿಕ ಸ್ಥಳ ಸ್ವಚ್ಛಗೊಳಿಸಿದ್ದು ಅವಮಾನಕರ: ವಿರುಪಾಕ್ಷ ಗುಡಿಮನಿ

ಕೆಂಭಾವಿ:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ರಾಮಲೀಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ತೆರಳಿದ ಬಳಿಕ, ಅವರು ಕುಳಿತಿದ್ದ ಹಾಗೂ ಕಾರ್ಯಕ್ರಮ ನಡೆದ ಸ್ಥಳವನ್ನು ಸ್ವಚ್ಛಗೊಳಿಸಿರುವುದು ಅತ್ಯಂತ ಅವಮಾನಕರ ಸಂಗತಿಯಾಗಿದೆ ಎಂದು ಕೆಂಭಾವಿ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ವಿರುಪಾಕ್ಷ ಗುಡಿಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇಶದ ಹಿರಿಯ ರಾಜಕೀಯ ನಾಯಕ ಹಾಗೂ ದಲಿತ ಸಮುದಾಯದ ಪ್ರತಿನಿಧಿಯಾಗಿರುವ ಖರ್ಗೆ ಅವರಿಗೆ ಈ ರೀತಿಯ ಅವಮಾನ ಮಾಡಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.
ಜಾತಿ ಆಧಾರಿತ ಭೇದಭಾವ ಮತ್ತು ಅಸ್ಪೃಶ್ಯತೆಯ ಮನೋಭಾವವನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಸ್ವಾಭಿಮಾನ ಹಾಗೂ ಗೌರವದಿಂದ ಬದುಕುವ ಹಕ್ಕನ್ನು ನೀಡಿದೆ ಎಂದು ಅವರು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಮುಖ ನಾಯಕರು ಭಾಗವಹಿಸಿ ತೆರಳಿದ ಬಳಿಕ ಸ್ಥಳವನ್ನು ಶುದ್ಧೀಕರಿಸಿರುವ ಘಟನೆ ನಿಜವಾಗಿದ್ದರೆ, ಅದು ಸಂವಿಧಾನದ ಆಶಯಗಳಿಗೆ ಹಾಗೂ ಸಾಮಾಜಿಕ ನ್ಯಾಯದ ಮೌಲ್ಯಗಳಿಗೆ ವಿರುದ್ಧವಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಜರುಗಿಸಬೇಕು ಎಂದು ಗುಡಿಮನಿ ಆಗ್ರಹಿಸಿದ್ದಾರೆ.
ಸಾಮಾಜಿಕ ಸಮಾನತೆ ಮತ್ತು ಮಾನವೀಯ ಗೌರವಕ್ಕಾಗಿ ಕಾಂಗ್ರೆಸ್ ಪಕ್ಷ ನಿರಂತರವಾಗಿ ಹೋರಾಟ ನಡೆಸುತ್ತಿದೆ. ಜಾತಿ, ಧರ್ಮ ಹಾಗೂ ವರ್ಗದ ಹೆಸರಿನಲ್ಲಿ ನಡೆಯುವ ಯಾವುದೇ ರೀತಿಯ ಅವಮಾನಕಾರಿ ಕೃತ್ಯಗಳ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಧ್ವನಿ ಎತ್ತಬೇಕು ಎಂದು ಅವರು ಹೇಳಿದ್ದಾರೆ.



