ಕೆಪಿಎಸ್‌ಸಿ ಅಕ್ರಮದ ಜಾಲಾಡಿದರೆ ಕುಮಾರಸ್ವಾಮಿ ಹೆಸರುಗಳೇ ಕಾಣುತ್ತವೆ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದ ಆರೋಪಗಳಿಗೆ ತಾರ್ಕಿಕ ಉತ್ತರ ನೀಡುವ ಬದಲು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪಲಾಯನದ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಈ ಕುರಿತು ಭಾನುವಾರ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮ ನಡೆದಿರುವುದನ್ನು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳು ಸ್ಪಷ್ಟಪಡಿಸಿವೆ ಎಂದು ಹೇಳಿದ್ದಾರೆ.
ನೇಮಕಾತಿ ರದ್ದುಪಡಿಸುವಂತೆ ನ್ಯಾಯಾಲಯಗಳು ಆದೇಶಿಸಿದ್ದರೂ ಹಾಗೂ ರಾಜ್ಯ ಸರ್ಕಾರದ ಮೇಲ್ಮನವಿಯೂ ವಜಾಗೊಂಡಿದ್ದರೂ, ಅಂದಿನ ಮುಖ್ಯಮಂತ್ರಿ ಅವರಿಗೆ ಅಭ್ಯರ್ಥಿಗಳನ್ನು ನೇಮಕ ಮಾಡುವಂತೆ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ಶಿಫಾರಸು ಪತ್ರ ನೀಡಿದ್ದರು ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
‘ಶಿಫಾರಸು ಲಾಬಿ ಮಾಡುವುದರ ಹಿಂದೆ ಕುಮಾರಸ್ವಾಮಿ ಅವರ ಹಿತಾಸಕ್ತಿ ಏನಿತ್ತು? ಉಚ್ಚ ನ್ಯಾಯಾಲಯವೇ ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ಕಂಡಿರುವಾಗ ಕುಮಾರಸ್ವಾಮಿ ಮತ್ತು ದೇವೇಗೌಡರು ಅಭ್ಯರ್ಥಿಗಳಿಗೆ ಕ್ಲೀನ್‌ಚಿಟ್ ನೀಡಿ ಶಿಫಾರಸು ಮಾಡಿದ್ದೇಕೆ?’ ಎಂದು ಅವರು ಪ್ರಶ್ನಿಸಿದ್ದಾರೆ.
ತಮ್ಮ ವಿರುದ್ಧ ಕೇಳಿಬರುವ ಆರೋಪಗಳಿಗೆ ಉತ್ತರಿಸುವ ಬದಲು ಇತರರ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿರುವ ಪ್ರಿಯಾಂಕ್ ಖರ್ಗೆ, ‘ಕುಮಾರಸ್ವಾಮಿ ಮಾಡಿದರೆ ಮೃಷ್ಟಾನ್ನ, ಬೇರೆಯವರು ಮಾಡಿದರೆ ಚಿತ್ರಾನ್ನವೇ?’ ಎಂದು ವ್ಯಂಗ್ಯವಾಡಿದ್ದಾರೆ.
ತಮ್ಮ ಸಂಬಂಧಿಕ ಅಧಿಕಾರಿಗಳ ನೇಮಕಾತಿಯನ್ನು ರದ್ದುಪಡಿಸಿದ್ದರೂ, ಸಿಎಟಿ ಮೊರೆ ಹೋಗಿ ತಡೆಯಾಜ್ಞೆ ಪಡೆದು ನಂತರ ಐಎಎಸ್‌ಗೆ ಭಡ್ತಿ ನೀಡಿ ಮುಂದುವರಿಸಿರುವ ವಿಚಾರದ ಹಿಂದಿನ ಕಾರಣವನ್ನು ಕುಮಾರಸ್ವಾಮಿ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅಕ್ರಮದ ಆರೋಪದಲ್ಲಿ ಜೈಲು ಸೇರಿದ್ದ ಹಿಂದಿನ ಕೆಪಿಎಸ್‌ಸಿ ಅಧ್ಯಕ್ಷರೊಬ್ಬರನ್ನು ಕುಮಾರಸ್ವಾಮಿ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿ ಮಾಡಿದ್ದರು ಎಂಬುದು ಸಾರ್ವಜನಿಕವಾಗಿ ತಿಳಿದಿರುವ ವಿಚಾರ ಎಂದು ಹೇಳಿರುವ ಖರ್ಗೆ, ‘ಅವರನ್ನು ಭೇಟಿ ಮಾಡಲು ಕಾರಣವೇನು? ತಮ್ಮ ಹೆಸರು ಹೊರಬರದಂತೆ ಮನವಿ ಮಾಡಲು ಅಥವಾ ಬೆದರಿಕೆ ಹಾಕಲು ತೆರಳಿದ್ದರೇ?’ ಎಂದು ಪ್ರಶ್ನಿಸಿದ್ದಾರೆ.
ಕೆಪಿಎಸ್‌ಸಿ ಅಕ್ರಮದ ಕುರಿತು ಸಮಗ್ರ ತನಿಖೆ ನಡೆಸಿದರೆ ಎಲ್ಲೆಡೆಯೂ ಕುಮಾರಸ್ವಾಮಿ ಅವರ ಹೆಸರುಗಳೇ ಕಾಣಿಸುತ್ತವೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಉಚ್ಚ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ನೇಮಕಾತಿಗೆ ಶಿಫಾರಸು ಮಾಡಿದ್ದವರು ಇದೀಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೇಮಕಾತಿ ಕುರಿತು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದ ಎಂದು ಅವರು ಟೀಕಿಸಿದ್ದಾರೆ.



