ಕಲಬುರಗಿಜಿಲ್ಲೆ ಸುದ್ದಿ

ಮಾನಹಾನಿಕರ ಪೋಸ್ಟ್: ಕಠಿಣ ಕ್ರಮಕ್ಕೆ ಆಗ್ರಹ

ಕಲಬುರಗಿ: ‘ಶಿವಸೇನಾ ಪಕ್ಷ’ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್‌ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ಹಾಗೂ ಜಿಲ್ಲಾಧಿಕಾರಿ ಅವರ ಫೋಟೊಗಳನ್ನು ಬಳಸಿಕೊಂಡು ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್‌ಟಿ ಹೋರಾಟ ಸಮಿತಿ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಬಣ) ಜಿಲ್ಲಾ ಘಟಕದ ಮುಖಂಡರು ಆಗ್ರಹಿಸಿದರು.

ಭಾನುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕದಸಂಸ ಜಿಲ್ಲಾ ಸಂಚಾಲಕ ಭೀಮಶಾ ಖನ್ನಾ, ರೈತರ ಸಮಸ್ಯೆಗಳ ಕುರಿತು ಲಚ್ಚಪ್ಪ ಜಮಾದಾರ ಅವರು ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲಿ ತೆಗೆದ ಫೋಟೊವನ್ನು ಬಳಸಿಕೊಂಡು, ‘ಬಡವರ ಅಕ್ಕಿ ಕಳ್ಳನ ಜೊತೆ ಜಿಲ್ಲಾಧಿಕಾರಿಗಳು ಎಲ್ಲಿಗೆ’ ಎಂಬ ಅರ್ಥ ಬರುವಂತೆ ಪೋಸ್ಟ್‌ ಹರಿಬಿಡಲಾಗಿದೆ. ಯಾವುದೇ ಸತ್ಯಾಸತ್ಯತೆ ಅಥವಾ ದಾಖಲೆಗಳಿಲ್ಲದೆ ಇಂತಹ ಆರೋಪ ಮಾಡಿರುವುದು ಲಚ್ಚಪ್ಪ ಜಮಾದಾರ ಅವರ ಗೌರವ ಮತ್ತು ಪ್ರತಿಷ್ಠೆಗೆ ಧಕ್ಕೆ ತರುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.

ಈ ಸಂಬಂಧ ಲಚ್ಚಪ್ಪ ಜಮಾದಾರ ಅವರು ಈಗಾಗಲೇ ಸೈಬರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಕೋಲಿ ಸಮಾಜದ ನಾಯಕರು, ಪ್ರತಿಷ್ಠಿತ ವ್ಯಕ್ತಿಗಳು ಹಾಗೂ ಸಮಾಜದ ಗುರುಗಳ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಸಾರ್ವಜನಿಕವಾಗಿ ಅವಮಾನಿಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂದು ಸಿದ್ಧಲಿಂಗ ಸ್ವಾಮಿ ಹಾಗೂ ಸಿದ್ದು ಅಲಿಯಾಸ್ ಸಿದ್ರಾಮಯ್ಯ ಹಿರೇಮಠ ಒತ್ತಾಯಿಸಿದರು.

ಅವಹೇಳನಕಾರಿ ಪೋಸ್ಟ್‌ ಕುರಿತು ಸಮಗ್ರ ಸೈಬರ್ ತನಿಖೆ ನಡೆಸಿ, ಪೋಸ್ಟ್‌ ಪ್ರಕಟಿಸಿದ ವ್ಯಕ್ತಿಯನ್ನು ಪತ್ತೆಹಚ್ಚಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಅಥವಾ ಆಧಾರರಹಿತ ಮಾಹಿತಿಯನ್ನು ಹರಡುವವರ ವಿರುದ್ಧವೂ ಸೂಕ್ತ ಕ್ರಮ ಜರುಗಿಸಬೇಕು ಎಂದು ಮುಖಂಡರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಮಲಿಂಗ ನಾಟಿಕರ್, ರಾಣು ಮುದ್ದನಕರ್, ಶಿವು ಧಣಿ, ಅಂಬಾರಾಯ ಜವಳಗಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button