ಯಾದಗಿರಿ

ವಿದ್ಯಾರ್ಥಿಗಳ ಏಳಿಗೆಗೆ ಒಗ್ಗಟ್ಟಿನ ಶ್ರಮ ಅಗತ್ಯ: ಅಶೋಕ್‌ಕುಮಾರ್ ತಳಕೇರಿ

ಕೆಂಭಾವಿ:ವಿದ್ಯಾರ್ಥಿಗಳ ಸಮಗ್ರ ಏಳಿಗೆ ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಕರು ಮತ್ತು ಸಿಬ್ಬಂದಿ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಯಾದಗಿರಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಯಾಗಿ ಬಡ್ತಿ ಹೊಂದಿರುವ ಅಶೋಕ್‌ಕುಮಾರ್ ತಳಕೇರಿ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಶೋಕ್‌ಕುಮಾರ್ ತಳಕೇರಿ ಅವರು ಯಾದಗಿರಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಯಾಗಿ ಪದೋನ್ನತಿ ಹೊಂದಿದ ಹಿನ್ನೆಲೆಯಲ್ಲಿ ಕಾಲೇಜಿನ ವತಿಯಿಂದ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಕೆಂಭಾವಿ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಎಲ್ಲ ಸಹೋದ್ಯೋಗಿಗಳು ಉತ್ತಮ ಸಹಕಾರ, ಪ್ರೀತಿ ಹಾಗೂ ಅವಕಾಶಗಳನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಲೇಜಿನ ಫಲಿತಾಂಶವನ್ನು ಮತ್ತಷ್ಟು ಉತ್ತಮಪಡಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕು. ಕಾಲೇಜಿನ ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಸಮಗ್ರ ಏಳಿಗೆಗೆ ನನ್ನ ಕಡೆಯಿಂದಲೂ ಸದಾ ಸಂಪೂರ್ಣ ಸಹಕಾರ ನೀಡುತ್ತೇನೆ’ ಎಂದು ಹೇಳಿದರು.

ಕಾಲೇಜಿನಲ್ಲಿ ಅವರು ಸಲ್ಲಿಸಿದ ನಿಸ್ವಾರ್ಥ ಶೈಕ್ಷಣಿಕ ಸೇವೆ ಹಾಗೂ ವಿದ್ಯಾರ್ಥಿಗಳಲ್ಲಿ ಜ್ಞಾನದ ಬೆಳಕು ಮೂಡಿಸಿದ ಕಾರ್ಯವನ್ನು ಸಹೋದ್ಯೋಗಿಗಳು ಸ್ಮರಿಸಿದರು. ಉಪನ್ಯಾಸಕರು ಅಶೋಕ್‌ಕುಮಾರ್ ತಳಕೇರಿ ಅವರಿಗೆ ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ ಗೌರವಿಸಿದರು.

ನೂತನ ಜವಾಬ್ದಾರಿಯೊಂದಿಗೆ ಯಾದಗಿರಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿರುವ ಅಶೋಕ್‌ಕುಮಾರ್ ಅವರಿಗೆ ಕಾಲೇಜಿನ ಸಿಬ್ಬಂದಿ ವರ್ಗವು ಮುಂದಿನ ವೃತ್ತಿ ಜೀವನಕ್ಕೆ ಶುಭ ಹಾರೈಸಿತು.

ಉಪನ್ಯಾಸಕರಾದ ಬಸಣ್ಣ, ವೀರೇಂದ್ರ, ಉತ್ತಮಕುಮಾರ್, ರಾಮಣ್ಣ, ಬಸವರಾಜ, ಬಸನಗೌಡ, ವಿಜಯಲಕ್ಷ್ಮಿ, ಯಶೋದಾ, ಶಂಕ್ರೆಮ್ಮ, ನಿರ್ಮಲಾ, ಸಿಂಧು ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button