ನಾಗಾವಿ ದಕ್ಷಿಣದ ತಕ್ಷಶಿಲಾ: ಮಲ್ಲಿಕಾರ್ಜುನ ಬಾಗೋಡಿ
ಪ್ರಾಚೀನ ಘಟಿಕಾಸ್ಥಾನದಲ್ಲಿ ವೇದ, ಶಾಸ್ತ್ರ, ಯೋಗ ವಿದ್ಯೆಗಳ ಬೋಧನೆ | ನಾಗಾವಿಯ ಸಾಂಸ್ಕೃತಿಕ ವೈಭವದ ಕುರಿತು ವಿಶೇಷ ಉಪನ್ಯಾಸ

ಚಿತ್ತಾಪುರ: ಕರ್ನಾಟಕದ ಪ್ರಾಚೀನ ಅಗ್ರಹಾರಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ನಾಗಾವಿ, ಒಂದು ಕಾಲದಲ್ಲಿ ಉನ್ನತ ಶಿಕ್ಷಣದ ಪ್ರಮುಖ ಕೇಂದ್ರವಾಗಿ ಬೆಳೆದು, ದಕ್ಷಿಣದ ತಕ್ಷಶಿಲಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ದೃಶ್ಯಕಲಾ ಅಧ್ಯಯನ ವಿಭಾಗದ ಉಪನ್ಯಾಸಕ ಮಲ್ಲಿಕಾರ್ಜುನ ಸಿ. ಬಾಗೋಡಿ ಹೇಳಿದರು.
ಪಟ್ಟಣದ ಆರ್.ಕೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಆಯೋಜಿಸಿದ್ದ ‘ನಾಗಾವಿ: ಸಾಂಸ್ಕೃತಿಕ ಮುಖಾಮುಖಿ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಗಾವಿಯ ಪ್ರಾಚೀನ ಮಹತ್ವವನ್ನು ವಿವರಿಸಿದ ಅವರು, ರಾಷ್ಟ್ರಕೂಟರ ಕಾಲದಲ್ಲಿ ಸುಪ್ರಸಿದ್ಧ ಅಗ್ರಹಾರವಾಗಿದ್ದ ನಾಗಾವಿ, ಚಾಲುಕ್ಯರ ಅರಸ ಒಂದನೇ ಸೋಮೇಶ್ವರನ ಕಾಲದಲ್ಲಿ ಘಟಿಕಾಸ್ಥಾನವಾಗಿ ಬೆಳೆದಿತ್ತು. ಮಧುವಪ್ಪರಸ ದಂಡನಾಯಕ ಈ ವಿದ್ಯಾಕೇಂದ್ರವನ್ನು ನಿರ್ಮಿಸಿದವರು. ವಿಶ್ವವಿದ್ಯಾಲಯದ ಮಟ್ಟದ ಉನ್ನತ ಶಿಕ್ಷಣ ನೀಡುವ ಸಾಮರ್ಥ್ಯ ಹೊಂದಿದ್ದ ಘಟಿಕಾಸ್ಥಾನವನ್ನು ನಿರ್ಮಿಸುವ ಮೂಲಕ ಮಧುವಪ್ಪರಸ ಭಾರತೀಯ ಸಾಂಸ್ಕೃತಿಕ ಇತಿಹಾಸದಲ್ಲಿ ತಮ್ಮ ಹೆಸರನ್ನು ಶಾಶ್ವತವಾಗಿ ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ನಾಗಾವಿಯ ಹೆಸರಿನ ಮಹತ್ವವನ್ನು ಸಾರುವ ಶಾಸನಗಳಲ್ಲಿ ‘ಅಗ್ರಹಾರ ನಾಗವಾವಿ’, ‘ಮಹಾಅಗ್ರಹಾರ ನಾಗವಾವಿ’ ಹಾಗೂ ‘ಸರ್ವನಮಸ್ಯದ ಅಗ್ರಹಾರ ನಾಗವಾವಿ’ ಎಂಬ ಉಲ್ಲೇಖಗಳಿವೆ. ಚತುರ್ವೇದಗಳಲ್ಲಿ ಪಾರಂಗತರಾದ ವಿಪ್ರೋತ್ತಮರು ನೆಲೆಸಿದ್ದ ನಾಗಾವಿಯನ್ನು ಭೂಮಿಯ ತಿಲಕದಂತೆ ಹಾಗೂ ಅಭಿನವ ಬ್ರಹ್ಮಲೋಕದಂತೆ ಶಾಸನವೊಂದು ವರ್ಣಿಸಿದೆ ಎಂದು ಹೇಳಿದರು.
ವೇದ, ಶಾಸ್ತ್ರ, ಯೋಗ ವಿದ್ಯೆಗಳ ಕೇಂದ್ರ
ಕಾರ್ಯಕ್ರಮದಲ್ಲಿ ಮಾತನಾಡಿದ ಪತ್ರಾಗಾರ ಮತ್ತು ಗ್ಯಾಸೆಟಿಯರ್ ಇಲಾಖೆಯ ಉಪನಿರ್ದೇಶಕ ಡಾ. ವೀರಶೆಟ್ಟಿ ಗಾರಂಪಳ್ಳಿ, ನಾಗಾವಿ ಘಟಿಕಾಸ್ಥಾನದಲ್ಲಿ ಪ್ರಾಚೀನ ಭಾರತದ ಪೌಢವಿದ್ಯೆಯ ಪ್ರಮುಖ ಶಾಖೆಗಳಾದ ವೇದ, ಶಾಸ್ತ್ರ ಹಾಗೂ ಯೋಗ ಸೇರಿದಂತೆ ವಿವಿಧ ವಿಷಯಗಳನ್ನು ಬೋಧಿಸಲಾಗುತ್ತಿತ್ತು ಎಂದರು. ಇಲ್ಲಿ ಬೋಧನೆ ಮಾಡುತ್ತಿದ್ದ ಉಪಾಧ್ಯಾಯರು ಮತ್ತು ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿತ್ತು ಎಂಬುದನ್ನು ಶಾಸನಗಳು ದಾಖಲಿಸಿವೆ ಎಂದು ತಿಳಿಸಿದರು.
ನಾಗಾವಿಯ ನೈಸರ್ಗಿಕ ಸಂಪತ್ತು ಮತ್ತು ಸಮೃದ್ಧಿಯೂ ಗಮನಾರ್ಹವಾಗಿತ್ತು. ಇಲ್ಲಿನ ಫಲವತ್ತಾದ ಭೂಮಿ ಸದಾ ಹಸಿರಿನಿಂದ ಕಂಗೊಳಿಸುತ್ತಿತ್ತು ಎಂಬುದಕ್ಕೆ ಲಕ್ಷಣೇಶ್ವರ ದೇವಾಲಯದ ಗೋಡೆಯಲ್ಲಿರುವ ಕ್ರಿ.ಶ. 1092ರ ಗದ್ಯಶಾಸನ ಸಾಕ್ಷಿಯಾಗಿದೆ ಎಂದು ವಿವರಿಸಿದರು.
ನಾಗಾವಿ ಸಂತೆಯಲ್ಲಿ ಮಾರಾಟವಾಗುತ್ತಿದ್ದ ಬೆಲೆಬಾಳುವ ವಸ್ತುಗಳ ಮಾರಾಟ ಮೌಲ್ಯದ ಹದಿನಾರನೇ ಒಂದು ಭಾಗವನ್ನು ದೇವಾಲಯಗಳ ಜೀರ್ಣೋದ್ಧಾರಕ್ಕೆ ನೀಡಲು ವರ್ತಕರು ನಿರ್ಧರಿಸಿದ್ದರು. ಈ ಆದಾಯದ ನಿರ್ವಹಣೆಗಾಗಿ ಸಂಭಾವಿತರಪ್ಪ ಶೆಟ್ಟಿಯವರ ನೇತೃತ್ವದಲ್ಲಿ ಧರ್ಮದರ್ಶಿ ಸಮಿತಿಯನ್ನು ರಚಿಸಲಾಗಿತ್ತು ಎಂಬ ವಿಚಾರವೂ ಶಾಸನದಲ್ಲಿ ಉಲ್ಲೇಖವಾಗಿದೆ ಎಂದು ಹೇಳಿದರು.
ಹಲವು ಧರ್ಮಗಳ ಸಾಂಸ್ಕೃತಿಕ ಸಂಗಮ
ನಾಗಾವಿ ಪರಿಸರದಲ್ಲಿ ಜೈಪುರುಷ ದೇವಾಲಯ, ಮಧುಸೂಧನಾಲಯ, ಜೈನ ಬಸದಿ, ರಾಮೇಶ್ವರ ದೇವಾಲಯ, ಲಕ್ಷ್ಮಣೇಶ್ವರ ದೇವಾಲಯ, ಸಿದ್ದೇಶ್ವರ ದೇವಾಲಯ, ಈರಪ್ಪಯ್ಯನ ಗದ್ದುಗೆ, ನಾಟ್ಯಶಾಲೆ, ಆಂಜನೇಯ ದೇವಾಲಯ ಹಾಗೂ ನಾಗಬೇಲಾಂಬಿಕಾ ದೇವಸ್ಥಾನ ಸೇರಿದಂತೆ ಹಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ಮಾರಕಗಳಿವೆ. ಕಾಲಕ್ರಮೇಣ ಕೆಲವು ಸ್ಮಾರಕಗಳು ರೂಪಾಂತರಗೊಂಡಿದ್ದರೂ, ಈ ಪ್ರದೇಶದ ಐತಿಹಾಸಿಕ ಮಹತ್ವವನ್ನು ಸಾರುತ್ತಿವೆ ಎಂದರು.
ಸಕಲ ಮತಧರ್ಮಗಳ ಕೇಂದ್ರವಾಗಿದ್ದ ನಾಗಾವಿ ‘ದಕ್ಷಿಣದ ಕಾಶಿ’ ಎಂದೂ ಪ್ರಸಿದ್ಧಿ ಪಡೆದಿತ್ತು. ರಾಮೇಶ್ವರ ದೇವಾಲಯದಲ್ಲಿ ಪುರಾಣ ಪ್ರವಚನಗಳು ನಡೆಯುತ್ತಿದ್ದರೆ, ಸಿದ್ದೇಶ್ವರ ಮಠದಲ್ಲಿ ಯೋಗಿ ಸನ್ಯಾಸಿಗಳು ವಾಸಿಸುತ್ತಿದ್ದರು. ಅವರು ತಮ್ಮ ಬಳಿಗೆ ಬರುತ್ತಿದ್ದ ಜನರಿಗೆ ಯೋಗಾಭ್ಯಾಸವನ್ನೂ ಕಲಿಸುತ್ತಿದ್ದರು. ಈ ಕಾರಣದಿಂದ ನಾಗಾವಿಗೆ ‘ದಕ್ಷಿಣದ ತಕ್ಷಶಿಲಾ’ ಎಂಬ ಹೆಸರೂ ಬಂದಿತ್ತು. ಇಷ್ಟೊಂದು ವೈಭವದಿಂದ ಮೆರೆದಿದ್ದ ನಾಗಾವಿ, ನಂತರ ತನ್ನ ಹಿಂದಿನ ಕೀರ್ತಿಯನ್ನು ಕಳೆದುಕೊಂಡಿರುವುದು ವಿಷಾದನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪದ್ಮಣ್ಯ ರಾಸಣಗಿ, ಭೀಮಣ್ಯ ಸಾಲಿ, ಡಾ. ನಾಗವೇಣಿ, ಮಲ್ಲಿಕಾರ್ಜುನ ಬಿರಾದಾರ, ಕೈಲಾಸಪತಿ ವಿಶ್ವಕರ್ಮ, ಶ್ರೀಕಾಂತ ಓಮಣ್ಣ, ಮಹಾದೇವ ಶಾಸ್ತ್ರಿ, ಶ್ರೀನಾಥ, ಶರಣಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.



