ಕಲಬುರಗಿಜಿಲ್ಲೆ ಸುದ್ದಿ

ಅನಾಥ ಮಕ್ಕಳಿಗೆ ಆಶ್ರಯ, ರೈತರ ಹಕ್ಕಿಗಾಗಿ ಹೋರಾಟ; ಸೊನ್ನದ ಶಿವಾನಂದ ಶ್ರೀಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ

ದಾಸೋಹ, ಶಿಕ್ಷಣ, ಸಮಾಜಸೇವೆಯೇ ಶಿವಾನಂದ ಮಹಾಸ್ವಾಮಿಗಳ ಬದುಕಿನ ಧ್ಯೇಯ

ಕಲಬುರಗಿ: ಅನ್ನದಾಸೋಹ, ಅಕ್ಷರದಾಸೋಹ ಹಾಗೂ ಸಮಾಜಸೇವೆಯ ಮೂಲಕ ಕಲ್ಯಾಣ ಕರ್ನಾಟಕದ ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಜೇವರ್ಗಿ ತಾಲ್ಲೂಕಿನ ಸೊನ್ನ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ವಿರಕ್ತಮಠದ ಪೀಠಾಧಿಪತಿ ಡಾ. ಶಿವಾನಂದ ಮಹಾಸ್ವಾಮಿಗಳು 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಮಡಿಕೇಶ್ವರ ಗ್ರಾಮದಲ್ಲಿ 1963ರ ಜೂನ್ 1ರಂದು ಜನಿಸಿದ ಶ್ರೀಗಳು, ಶಿವಯೋಗ ಮಂದಿರದಲ್ಲಿ ಆಧ್ಯಾತ್ಮಿಕ ಶಿಕ್ಷಣ ಪಡೆದು, ಬಳಿಕ ಪದವಿ ಶಿಕ್ಷಣ ಪೂರ್ಣಗೊಳಿಸಿದರು. 1997ರ ಮೇ 19ರಂದು ಸೊನ್ನದ ಶ್ರೀಮಠದ ಪೀಠಾಧಿಪತಿಗಳಾಗಿ ಅಧಿಕಾರ ಸ್ವೀಕರಿಸಿ ಧಾರ್ಮಿಕ ಸೇವೆಯ ಜತೆಗೆ ಸಾಮಾಜಿಕ ಕಾರ್ಯಗಳಿಗೆ ಆದ್ಯತೆ ನೀಡಿದರು.

ಅನಾಥ ಹಾಗೂ ಬಡ ಮಕ್ಕಳಿಗೆ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ಶಿವಾನಂದ ಅನಾಥಾಶ್ರಮ ಆರಂಭಿಸಿದರು. ಬಳಿಕ ಶ್ರೀ ಶಿವಾನಂದ ಶಿವಯೋಗಿ ಗ್ರಾಮೀಣ ಜನಕಲ್ಯಾಣ ಸಂಸ್ಥೆ ಸ್ಥಾಪಿಸಿ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಶಿಕ್ಷಕರ ತರಬೇತಿ ಕೇಂದ್ರ ಹಾಗೂ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಆರಂಭಿಸಿದರು. ಪ್ರಸ್ತುತ ಸುಮಾರು 500 ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಜೇವರ್ಗಿ ಭಾಗದ ರೈತರ ಜೀವನಾಡಿಯಾದ ಮಲ್ಲಾಬಾದ್ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ 13 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಘತ್ತರಗಿ ಗ್ರಾಮದಲ್ಲಿ ಶಾಲೆ ನಿರ್ಮಾಣಕ್ಕಾಗಿ ‘ಅಕ್ಷರ ಜೋಳಿಗೆ’ ಅಭಿಯಾನ ನಡೆಸಿ ₹80 ಲಕ್ಷ ಸಂಗ್ರಹಿಸಿ ಐದು ಎಕರೆ ಜಮೀನು ಖರೀದಿಸಿ, 2.30 ಎಕರೆ ಜಮೀನನ್ನು ಸರ್ಕಾರಿ ಪ್ರೌಢಶಾಲೆಗೆ ಹಸ್ತಾಂತರಿಸಿದ್ದರು.

ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರಿಗೂ ದಾಸೋಹ ನೀಡುವ ಮೂಲಕ ಕೋಮು ಸೌಹಾರ್ದತೆಗೆ ಮಾದರಿಯಾಗಿದ್ದಾರೆ. ಆರೋಗ್ಯ ಶಿಬಿರ, ಉಚಿತ ಸಾಮೂಹಿಕ ವಿವಾಹ, ನೇತ್ರ ಚಿಕಿತ್ಸಾ ಶಿಬಿರ ಹಾಗೂ ಶರಣರ ತತ್ವಗಳ ಪ್ರಸಾರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಗುಲಬರ್ಗಾ ವಿಶ್ವವಿದ್ಯಾಲಯವು 2013ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಶಿಕ್ಷಣ, ದಾಸೋಹ, ಸಾಮಾಜಿಕ ನ್ಯಾಯ ಹಾಗೂ ಜನಪರ ಹೋರಾಟಗಳ ಮೂಲಕ ಗುರುತಿಸಿಕೊಂಡಿರುವ ಶ್ರೀಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಕಲ್ಯಾಣ ಕರ್ನಾಟಕದ ಜನರಲ್ಲಿ ಸಂತಸ ಮೂಡಿಸಿದೆ.

Related Articles

Leave a Reply

Your email address will not be published. Required fields are marked *

Back to top button