ಕಲಬುರಗಿಜಿಲ್ಲೆ ಸುದ್ದಿ

ರೈತರಿಗೆ ಎಕರೆಗೆ ₹50 ಸಾವಿರ ಬರ ಪರಿಹಾರಕ್ಕೆ ಆಗ್ರಹ

ಜೇವರ್ಗಿಯಿಂದ ಜಿಲ್ಲೆಯಾದ್ಯಂತ ರೈತ-ಕಾರ್ಮಿಕರ ಜಾಗೃತಿ ಅಭಿಯಾನಕ್ಕೆ ಚಾಲನೆ

ಜೇವರ್ಗಿ: ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಬರ ಪರಿಹಾರ ಹಾಗೂ ಬೆಳೆ ವಿಮೆ ಪರಿಹಾರ ನೀಡಬೇಕು. ಬಡವರು ಮತ್ತು ಕಾರ್ಮಿಕರಿಗೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶ ಕಲ್ಪಿಸಿ ಉದ್ಯೋಗದ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘ (KSCWCU-NCL) ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಪಟ್ಟಣದ KSCWCU-NCL ಸಂಘಟನೆಯ ಕಚೇರಿಯಲ್ಲಿ ಮಹಾತ್ಮ ಜ್ಯೋತಿಬಾ ಫುಲೆ, ಮಾತೆ ಸಾವಿತ್ರಿಬಾಯಿ ಫುಲೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳ ಮಾರ್ಗದಲ್ಲಿ ರೈತರು, ಬಡವರು ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ರೂಪಿಸುವ ಸಂಕಲ್ಪದೊಂದಿಗೆ ಅಭಿಯಾನ ಆರಂಭಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘದ ರಾಜ್ಯ ಉಪಾಧ್ಯಕ್ಷ ಶಂಕರ ಕಟ್ಟಿಸಂಗಾವಿ, ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದು, ರೈತರು ಬಿತ್ತನೆ ಮಾಡಿದ ಬೆಳೆಗಳ ಕುರಿತು ಆತಂಕದಲ್ಲಿದ್ದಾರೆ. ಮತ್ತೊಂದೆಡೆ, ಕೆಲಸದ ಅಭಾವದಿಂದ ಬಡವರು ಮತ್ತು ಕಾರ್ಮಿಕರು ಜೀವನ ನಿರ್ವಹಣೆಗೆ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು.

ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ಸರ್ಕಾರಗಳ ಆದ್ಯತೆಯಾಗಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣ ಮಧ್ಯಪ್ರವೇಶಿಸಿ ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಬರ ಪರಿಹಾರ ಹಾಗೂ ಬೆಳೆ ವಿಮೆ ಪರಿಹಾರ ಒದಗಿಸಬೇಕು. ಗ್ರಾಮೀಣ ಭಾಗದ ಬಡವರು ಮತ್ತು ಕಾರ್ಮಿಕರಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಬಿ-ರಾಮ್‌ಜಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ರೈತರು ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಸರ್ಕಾರಗಳ ಗಮನಕ್ಕೆ ತರುವ ಉದ್ದೇಶದಿಂದ ಜಿಲ್ಲೆಯ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಜಾಗೃತಿ ಮೂಡಿಸಲಾಗುವುದು. ಪರಿಹಾರ, ಉದ್ಯೋಗ ಹಾಗೂ ಕಾರ್ಮಿಕರ ಹಕ್ಕುಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದರ ಜತೆಗೆ, ಸರ್ಕಾರಗಳು ಬೇಡಿಕೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಹಿಬೂಬ ಖಾನ್, ತಾಲೂಕು ಅಧ್ಯಕ್ಷ ಶೇಖ್ ಮಕಬೂಲ್ ಗುತ್ತೇದಾರ, ಗೌರವಾಧ್ಯಕ್ಷ ಮೈಬೂಬ ಸಾಬ್ ಗುತ್ತೇದಾರ, ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಕಲ್ಲೂರ, ತಾಲೂಕು ಉಪಾಧ್ಯಕ್ಷ ನಾಗೇಶ ಗುತ್ತೇದಾರ, ಕಾರ್ಯದರ್ಶಿ ಶಂಶೋದ್ದೀನ್ ಹಿಪ್ಪರಗಿ, ಖಜಾಂಚಿ ಸೈಯದ್ ಸಾಬ್ ಗುತ್ತೇದಾರ, ಸಂಘಟನಾ ಕಾರ್ಯದರ್ಶಿ ಶೇಖರ ಕೋಬಾಳಕರ್, ಸಂಘಟನೆಯ ಸದಸ್ಯರಾದ ಆಸೀಫ್ ಗುತ್ತೇದಾರ, ನಾಸೀರ್ ಗುತ್ತೇದಾರ, ಹಣಮಂತ, ಇಸಾಕ್ ಪೆಂಟರ್, ಶಬ್ಬೀರ್ ಗುತ್ತೇದಾರ, ಲಾಳೇಸಾಬ್, ರಾಜು ರಾಠೋಡ, ರಾಹುಲ್ ರಾಠೋಡ ಸೇರಿದಂತೆ ರೈತಪರ ಮತ್ತು ಕಾರ್ಮಿಕಪರ ಮುಖಂಡರು ಹಾಗೂ ಯುವಕರು ಭಾಗವಹಿಸಿದ್ದರು.

janabhipraya

https://janabhipraya.com

Related Articles

Leave a Reply

Your email address will not be published. Required fields are marked *

Back to top button