ಕಲಬುರಗಿಜಿಲ್ಲೆ ಸುದ್ದಿ

ದೇಗುಲಗಳ ಧರ್ಮ ಪ್ರಶ್ನಿಸುವ ಅಗತ್ಯವಿದೆ: ಡಿ.ಎಂ. ನದಾಫ್

ವಾಡಿ: ‘ದೇಗುಲಗಳ ಧರ್ಮ ಹಾಗೂ ಧರ್ಮದ ದೇಗುಲಗಳು’ ಕೃತಿಯ ಮೂಲಕ ಸಾಹಿತಿ ಪ್ರಬೋಧನಕಾರ ಠಾಕರೆ ಅವರು, ‘ನಾವು ಗುಡಿ ಕಟ್ಟುವ ಮೊದಲು ದೇವರುಗಳು ಎಲ್ಲಿದ್ದರು?’ ಎಂಬ ಪ್ರಶ್ನೆಗಳನ್ನು ಮುಂದಿಡುತ್ತಾರೆ ಎಂದು ಹಿರಿಯ ಸಾಹಿತಿ ಡಿ.ಎಂ. ನದಾಫ್ ಹೇಳಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಕಾಲೋನಿಯ ಸಿದ್ಧಾರ್ಥ ಭವನದಲ್ಲಿ ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ಸೂರ್ಯಕಾಂತ ಸುಜ್ಯಾತ್ ಅನುವಾದಿಸಿರುವ ‘ದೇಗುಲಗಳ ಧರ್ಮ ಹಾಗೂ ಧರ್ಮದ ದೇಗುಲಗಳು’ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

‘ಸರ್ವವ್ಯಾಪಿಯಾದ ದೇವರು ನಾಲ್ಕು ಗೋಡೆಗಳ ನಡುವೆ, ಪುಟ್ಟ ಗುಂಬಜದ ಒಳಗೆ ಇರುವ ಅನಿವಾರ್ಯತೆ ಏನಿತ್ತು?’ ಎಂಬ ಸವಾಲನ್ನು ಕೃತಿಕಾರರು ಎತ್ತಿದ್ದಾರೆ. ಇಂತಹ ಪ್ರಶ್ನೆಗಳು ಸಮಾಜದಲ್ಲಿ ವೈಚಾರಿಕ ಚಿಂತನೆ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.ಸತ್ಯ, ವೈಚಾರಿಕತೆ ಹಾಗೂ ವೈಜ್ಞಾನಿಕ ದೃಷ್ಟಿಕೋನವನ್ನು ಪ್ರತಿಪಾದಿಸುವ ಚಾರ್ವಾಕ ಪಂಥದ ಬಗ್ಗೆ ಪಂಡಿತರು ಮತ್ತು ಸಾಮಾನ್ಯರು ನಿರ್ಲಕ್ಷ್ಯ ತೋರಿದ್ದಾರೆ. ಆದರೆ, ಪ್ರಬೋಧನಕಾರ ಠಾಕರೆ ಅವರಂತಹ ವೈಚಾರಿಕ ಲೇಖಕರು ಸತ್ಯದ ಮೇಲೆ ಬೆಳಕು ಚೆಲ್ಲಿದ್ದರಿಂದ ಮುಚ್ಚಿಹೋಗಿದ್ದ ನೈಜ ಇತಿಹಾಸವನ್ನು ಅರಿಯಲು ಸಾಧ್ಯವಾಗುತ್ತಿದೆ ಎಂದು ನದಾಫ್ ಹೇಳಿದರು.

ಕಾರ್ಯಕ್ರಮದಲ್ಲಿ ಖೇಮಲಿಂಗ ಬೆಳಮಗಿ, ಹರಿಶ್ಚಂದ್ರ ಕರಣಿಕ, ದೇವಿಂದ್ರ ಕರದಳ್ಳಿ, ದೊಡ್ಡಶ ಬಡಿಗೇರ, ಸಂತೋಷ ಜೋಗೂರ, ಭೀಮಾ ನಾಟೇಕರ, ಬಸವರಾಜ ಜೋಗೂರ, ಜಗನ್ನಾಥ ಹಂದರ್ಕಿ, ಆನಂದಕುಮಾರ ನಿಂಬರ್ಗಾ, ನಾಗಮ್ಮ ಧನ್ನೇಕರ, ಶಕುಂತಲಾ ಕಟ್ಟಿ, ಲಕ್ಷ್ಮೀ ಕೋಳಕೂರ, ಅಶ್ವಿನಿ, ಗೀತಾ, ಭೀಮಬಾಯಿ ಸುರಪುರ, ಮನೋರಮಾ ದನ್ನೇಕರ, ಸುನೀತಾ ಖಜೂರಿ, ರೇಣು ಪ್ರದಾನಿ, ಸುಲೋಚನಾ ಕೋಳಕೂರ, ಶಿವಲೀಲಾ ಬಂದಳ್ಳಿ, ಮಲ್ಲಮ್ಮ, ಶರಣು ಯರಗೋಳ, ವಿಜಯ ಅನ್ವರಕರ, ದಿಲೀಪ ಮೈನಾಳಕರ, ಮಹೇಶ ರಾಜಳ್ಳಿ, ಸಂತೋಷ ಕೋಮಟೆ, ವಿಶಾಲ ಬಡಿಗೇರ, ವಿನಯ ಕೆ., ಗೌತಮ, ಮಿಲಿಂದ ಸೇರಿದಂತೆ ಹಲವರು ಇದ್ದರು.ಸಂಚಲನ ವೇದಿಕೆ ಪ್ರಧಾನ ಕಾರ್ಯದರ್ಶಿ ರವಿ ಕೋಳಕೂರ ಸ್ವಾಗತಿಸಿದರು. ದಯಾನಂದ ಖಜೂರಿ ನಿರೂಪಿಸಿದರು. ರಘುವೀರ ಪವಾರ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button