ಶಿಕ್ಷಣದಿಂದಲೇ ಸದೃಢ ಭಾರತ ನಿರ್ಮಾಣ ಸಾಧ್ಯ: ಅಂಜುಮ್ ತಬಸುಮ್

ಜೇವರ್ಗಿ, ಆ. 15: ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ, ಅಪಾರ ಕೊಡುಗೆ ನೀಡಿದ್ದಾರೆ. ಅವರ ತ್ಯಾಗದ ಫಲವಾಗಿ ದೊರೆತ ಸ್ವಾತಂತ್ರ್ಯವನ್ನು ಸಾರ್ಥಕಗೊಳಿಸಿ ಸದೃಢ ಹಾಗೂ ಬಲಿಷ್ಠ ಭಾರತ ನಿರ್ಮಿಸಲು ಶಿಕ್ಷಣ ಅತ್ಯವಶ್ಯಕ ಎಂದು ತಾಲೂಕು ದಂಡಾಧಿಕಾರಿ ಅಂಜುಮ್ ತಬಸುಮ್ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಶನಿವಾರ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ನಮಗೆ ಸುಖಾಸುಮ್ಮನೆ ದೊರೆತಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಭಾರತಾಂಬೆಯ ಅನೇಕ ಪುತ್ರರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಅನೇಕ ಮಹನೀಯರ ತ್ಯಾಗ, ಬಲಿದಾನ ಹಾಗೂ ಹೋರಾಟದ ಫಲವಾಗಿ ದೇಶ ಸ್ವತಂತ್ರಗೊಂಡಿದೆ ಎಂದು ಅವರು ಸ್ಮರಿಸಿದರು.
ಸ್ವಾತಂತ್ರ್ಯ ದೊರೆತು ಎಂಟು ದಶಕಗಳು ಕಳೆದರೂ ದೇಶದಲ್ಲಿ ಅಸಮಾನತೆ, ಜಾತೀಯತೆ, ಕಂದಾಚಾರ, ಅನಕ್ಷರತೆ ಹಾಗೂ ಬಡತನದಂತಹ ಸಮಸ್ಯೆಗಳು ಇನ್ನೂ ಕಂಡುಬರುತ್ತಿರುವುದು ನೋವಿನ ಸಂಗತಿ. ಇಂತಹ ಸಮಸ್ಯೆಗಳನ್ನು ನಿವಾರಿಸಿ ಬಲಿಷ್ಠ ಭಾರತ ನಿರ್ಮಿಸಬೇಕಾದರೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಶಾಶ್ವತ ಪರಿವರ್ತನೆ ತರಲು ಸಾಧ್ಯ ಎಂದು ಅಂಜುಮ್ ತಬಸುಮ್ ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇಒ ರವಿಚಂದ್ರ ರೆಡ್ಡಿ, ಸಿಪಿಐ ಬಾಪುಗೌಡ ಪಾಟೀಲ, ಬಿಇಒ ವೀರಣ್ಣ ಭೊಮ್ಮನಹಳ್ಳಿ, ಸತೀಶಕುಮಾರ ಸಂಗನ, ಶಂಭುಲಿಂಗ ದೇಸಾಯಿ, ಪ್ರತಾಪ ಕಟ್ಟಿ, ದಾನಪ್ಪಗೌಡ ಹಳಿಮನಿ, ಡಾ. ಉಮೇಶ ಶರ್ಮಾ, ಶೋಭಾ ಸಜ್ಜನ್, ಸುಮಂಗಲಾ ಹೂಗಾರ, ಹುಲಿಕಂಠರಾಯ ಸುಂಬಡ, ಪಿಎಸ್‌ಐ ಗಜಾನಂದ ಬಿರಾದರ, ರೇವಣಸಿದ್ದಪ್ಪ ಹೂಗಾರ, ಗೌಡಪ್ಪಗೌಡ, ಸಂತೋಷ ಸಂಗಮ, ಬಸವರಾಜ ತೇಲಕರ್, ರಾಜಶೇಖರ ಸೀರಿ, ಚಂದ್ರಶೇಖರ ಹರನಾಳ, ರವಿಚಂದ್ರ ಗುತ್ತೆದಾರ, ವಿಶ್ವ ಆಲೂರ, ದೇವಿಂದ್ರ ಬಡಿಗೇರ, ಪ್ರಜ್ವಲ್ ಧನಕರ್, ಮನ್ವಿತಾ ಹೊಸಮನಿ, ಮಹೇಶ ಕೆಂಬಾವಿ, ಸಿದ್ದು ಕೇರೂರ, ಶ್ರೀಹರಿ ಕರಕಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



