ಕಲಬುರಗಿಜಿಲ್ಲೆ ಸುದ್ದಿ

ಸೆ.23ರಂದು ಉಚಿತ ಆಯುರ್ವೇದ, ಪಂಚಕರ್ಮ ಆರೋಗ್ಯ ಶಿಬಿರ

ಕಲಬುರಗಿ: ಆಯುರ್ವೇದವು ರೋಗ ಬಂದ ನಂತರ ಚಿಕಿತ್ಸೆ ನೀಡುವುದಕ್ಕಿಂತ ರೋಗನಿರೋಧಕ ಜೀವನಶೈಲಿ ಹಾಗೂ ಆರೋಗ್ಯಕರ ದಿನಚರಿಯ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಮಹತ್ವದ ಪಾತ್ರ ವಹಿಸುತ್ತದೆ. ಸಾರ್ವಜನಿಕರಲ್ಲಿ ಆಯುರ್ವೇದದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಸೆ.23ರಂದು ಉಚಿತ ಆಯುರ್ವೇದ ಹಾಗೂ ಪಂಚಕರ್ಮ ಆರೋಗ್ಯ ಶಿಬಿರ ಆಯೋಜಿಸಲಾಗಿದೆ ಎಂದು ಡಾ. ರಕ್ಷಾ ಎಸ್. ಶೆಟ್ಟಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರೋಗ್ಯಕರ ನಾಳೆಗಾಗಿ ಆಯುರ್ವೇದ–ಸ್ವಸ್ಥ ಭವಿಷ್ಯಕ್ಕಾಗಿ ಆಯುರ್ವೇದ’ ಎಂಬ ಧ್ಯೇಯವಾಕ್ಯದೊಂದಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತ ಪ್ರಕೃತಿ ವಿಶ್ಲೇಷಣೆ ಹಾಗೂ ನಾಡಿ ಪರೀಕ್ಷೆ ನಡೆಸಲಾಗುವುದು. ಮಧುಮೇಹ, ರಕ್ತದೊತ್ತಡ, ಸ್ಥೂಲಕಾಯ, ಸಂಧಿನೋವು, ಆತಂಕ, ಚರ್ಮರೋಗ ಸೇರಿದಂತೆ ಜೀವನಶೈಲಿಗೆ ಸಂಬಂಧಿಸಿದ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ಆಯುರ್ವೇದ ವೈದ್ಯಕೀಯ ಸಲಹೆ ನೀಡಲಾಗುವುದು. ಆಹಾರ ಪದ್ಧತಿ, ದಿನಚರಿ ಹಾಗೂ ಆರೋಗ್ಯಕರ ಜೀವನಶೈಲಿ ಕುರಿತು ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು.

ಅಭ್ಯಾಂಗ, ಶಿರೋಧಾರಾ, ನಸ್ಯ, ಕಟಿಬಸ್ತಿ ಸೇರಿದಂತೆ ವಿವಿಧ ಪಂಚಕರ್ಮ ಚಿಕಿತ್ಸಾ ವಿಧಾನಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು. ಫ್ಯಾಟಿ ಲಿವರ್, ಕಾಮಾಲೆ ಸೇರಿದಂತೆ ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಆಯುರ್ವೇದ ಚಿಕಿತ್ಸಾ ವಿಧಾನಗಳು ಹಾಗೂ ಲಿವರ್ ಡಿಟಾಕ್ಸ್ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.

6 ತಿಂಗಳಿಂದ 16 ವರ್ಷದೊಳಗಿನ ಮಕ್ಕಳಲ್ಲಿ ಸುವರ್ಣ ಬಿಂದು ಪ್ರಾಶನ ಕುರಿತು ಮಾಹಿತಿ ನೀಡಲಾಗುವುದು. ಮಕ್ಕಳ ದೈಹಿಕ ಹಾಗೂ ಮಾನಸಿಕ ಕ್ಷೇಮಾಭಿವೃದ್ಧಿಗೆ ಸಂಬಂಧಿಸಿದ ಆಯುರ್ವೇದ ಪದ್ಧತಿಯ ಕುರಿತು ಪೋಷಕರಿಗೆ ಅಗತ್ಯ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಮೊಡವೆ, ಚರ್ಮದ ಕಪ್ಪು ಕಲೆಗಳು, ಹೈಪರ್‌ಪಿಗ್ಮೆಂಟೇಶನ್ ಸೇರಿದಂತೆ ವಿವಿಧ ಚರ್ಮ ಹಾಗೂ ಸೌಂದರ್ಯ ಸಂಬಂಧಿತ ಸಮಸ್ಯೆಗಳಿಗೆ ಆಯುರ್ವೇದ ಒಳೌಷಧಿ, ಹೊರಚಿಕಿತ್ಸೆ ಹಾಗೂ ಪಂಚಕರ್ಮ ವಿಧಾನಗಳ ಕುರಿತು ಸಲಹೆ ನೀಡಲಾಗುವುದು. ಅಜೀರ್ಣ, ಮಲಬದ್ಧತೆ ಹಾಗೂ ಮನೋವಿಕಾರಗಳಿಗೆ ಸಂಬಂಧಿಸಿದ ಆಯುರ್ವೇದ ಚಿಕಿತ್ಸಾ ವಿಧಾನಗಳ ಬಗ್ಗೆಯೂ ಮಾರ್ಗದರ್ಶನ ನೀಡಲಾಗುವುದು ಎಂದರು.

ಡಾ. ರಕ್ಷಾ ಎಸ್. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಶಿಬಿರದ ಸ್ಥಳ: ಡಾ. ಶೆಟ್ಟೀಸ್ ಆಯುರ್ ಕ್ಲಿನಿಕ್, ಆಯುರ್ವೇದ ಮತ್ತು ಪಂಚಕರ್ಮ ಕೇಂದ್ರ, ಆನಂದ್ ಹೋಟೆಲ್ ಹತ್ತಿರ, ಎಸ್.ಬಿ. ಟೆಂಪಲ್ ರಸ್ತೆ, ಕಲಬುರಗಿ. ಸಮಯ: ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಹಾಗೂ ಸಂಜೆ 5.30ರಿಂದ ರಾತ್ರಿ 8.30ರವರೆಗೆ. ಸಂಪರ್ಕ: 7975077535, 7483350510.

Related Articles

Leave a Reply

Your email address will not be published. Required fields are marked *

Back to top button