‘ಬೆಪ್ಪು ತಕ್ಕಡಿ ಬೋಳೇಶಂಕರ’ ನಾಟಕ ಪ್ರದರ್ಶನ

ಕಲಬುರಗಿ: ರಂಗನಯನ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಡಾ. ಚಂದ್ರಶೇಖರ ಕಂಬಾರ ಅವರ ‘ಬೆಪ್ಪು ತಕ್ಕಡಿ ಬೋಳೇಶಂಕರ’ ನಾಟಕ ಪ್ರದರ್ಶನವನ್ನು ನಗರದ ಶ್ರೀ ಗುರುನಾಗಲಿಂಗೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಆದರ್ಶ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ರಾಮಣ್ಣ ಮೇದಾ, ಆರಾಧನಾ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಕಾಶಿನಾಥ ಪಾಟೀಲ ಹಾಗೂ ಜಗನ್ನಾಥ ರೆಡ್ಡಿ ಅತಿಥಿಗಳಾಗಿ ಭಾಗವಹಿಸಿದ್ದರು. ಗಣ್ಯರಿಗೆ ಕಲಾವಿದರು ಹೂಗುಚ್ಛ ನೀಡಿ ಸ್ವಾಗತಿಸಿದರು.
ರಾಮಣ್ಣ ಮೇದಾ ಮಾತನಾಡಿ, ‘ನಾಟಕವು ಬದುಕು, ಸಂಸ್ಕೃತಿ ಹಾಗೂ ಜೀವನದ ಮೌಲ್ಯಗಳನ್ನು ಪರಿಚಯಿಸುವ ಪ್ರಬಲ ಮಾಧ್ಯಮವಾಗಿದೆ. ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ನಾಟಕ ಹಾಗೂ ಸಂಗೀತ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು’ ಎಂದು ಹೇಳಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿ ಹಾಗೂ ಅಧ್ಯಕ್ಷತೆಯನ್ನು ರಂಗನಯನ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಅರವಿಂದ ಕುಲಕರ್ಣಿ ವಹಿಸಿದ್ದರು.
ನಂತರ ಕಲಾವಿದರಿಂದ ‘ಬೆಪ್ಪು ತಕ್ಕಡಿ ಬೋಳೇಶಂಕರ’ ನಾಟಕ ಪ್ರದರ್ಶನಗೊಂಡಿತು. ಕಲಾವಿದರು ತಮ್ಮ ಅಭಿನಯ, ಸಂಭಾಷಣೆ ಹಾಗೂ ಪಾತ್ರ ನಿರ್ವಹಣೆಯ ಮೂಲಕ ಪ್ರೇಕ್ಷಕರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಮಕ್ಕಳು, ಕಲಾವಿದರು ಹಾಗೂ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಟಕ ವೀಕ್ಷಿಸಿದರು. ಎಲ್ಲರ ಸಹಕಾರದಿಂದ ನಾಟಕ ಪ್ರದರ್ಶನ ಯಶಸ್ವಿಯಾಗಿ ನಡೆಯಿತು.



